ಪರಿಶಿಷ್ಟರು ಸಿಎಂ ಆಗದಿರುವುದು ವಿಪರ್ಯಾಸ

02 HANUR 1
ಹನೂರಿನಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಸಮುದಾಯದ ಜಾಗೃತಿ ಸಮಾವೇಶವನ್ನು ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಉದ್ಘಾಟಿಸಿದರು. ಬಸವರಾಜು, ಶೈಲೇಶ್‌ಕುಮಾರ್, ಶಾಂತರಾಜು, ಸಂಪತ್‌ಕುಮಾರ್ ಇತರರು ಇದ್ದರು.
Published on

ಹನೂರು: ಸಮುದಾಯದ ವಿಮೋಚನೆಗಾಗಿ ಶ್ರಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಗಮನಹರಿಸಬೇಕು ಎಮದು ಮೈಸೂರು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ಧ ಪರಿಶಿಷ್ಟ ಜಾತಿ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಸಮುದಾಯವು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಇದಕ್ಕೆ ಸಂಘಟನೆ ಕೊರತೆಯೇ ಕಾರಣ. ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಪರಿಶಿಷ್ಟ ಜಾತಿ ನಾಯಕರು ಮುಖ್ಯಮಂತ್ರಿ ಆಗದಿರುವುದು ವಿಪರ್ಯಾಸ. ನಮ್ಮ ಸಮುದಾಯವನ್ನು ಮುನ್ನಡೆಸುತ್ತಿರುವ ರಾಜಕೀಯ ನಾಯಕರು ನಮ್ಮನ್ನು ಗುಲಾಮಗಿರಿಗೆ ದೂಡಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಭಿನ್ನಾಭಿಪ್ರಾಯಗಳನ್ನು ಮರೆತು ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಬೆಕು ಎಂದು ತಿಳಿಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ರಾಜಕೀಯ ನಾಯಕರು ನಮ್ಮ ಸಮುದಾಯವನ್ನು ಚುನಾವಣೆ ವೇಳೆ ಮಾತ್ರ ಬಳಸಿಕೊಳ್ಳುತ್ತಾರೆ. ಈ ಮೂಲಕ ಗೆಲುವು ಸಾಧಿಸಿ ಅಧಿಕಾರ ಪಡೆಯುತ್ತಾರೆ. ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗುವಂತಾಗಬೇಕು ಎಂದು ಹೇಳಿದರು. ಪ್ರಾಂಶುಪಾಲ ಶೈಲೇಶ್‌ಕುಮಾರ್, ಪ್ರಾಧ್ಯಾಪಕ ಶಾಂತರಾಜು, ಮೈಸೂರು ಮಾದಿಗ ಸಂಘಟನೆ ಅಧ್ಯಕ್ಷ ಪ್ರಸನ್ನ ಚಕ್ರವರ್ತಿ, ವಕೀಲ ಯೋಗೇಶ್, ಪಪಂ ಸದಸ್ಯ ಸಂಪತ್‌ಕುಮಾರ್, ಮುಖಂಡರಾದ ಕಿರಣ್, ಶಾಗ್ಯ ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net