

ನಂಜನಗೂಡು: ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ಜನರಿಗೆ ಮೀಸಲಾತಿ ಪ್ರಮಾಣ ಹೆಚ್ಚಳದ ಜತೆಗೆ ಪರಿಶಿಷ್ಟ ಸಮುದಾಯದ ಜನರ ಹಲವು ದಶಕಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಶೋಷಿತ ಸಮುದಾಯದ ಜನರಿಗೆ ಧ್ವನಿಯಾಗಿದೆ. ಹೀಗಾಗಿ ಪರಿಶಿಷ್ಟ ಸಮುದಾಯದ ಶ್ರೇಯೋಭಿವೃದ್ಧಿಗೆ ಬಿಜೆಪಿ ಬೆಂಬಲಿಸುವಂತೆ ಶಾಸಕ ಬಿ.ಹರ್ಷವರ್ಧನ್ ಮನವಿ ಮಾಡಿದರು.
ಶನಿವಾರ ನಗರದ 25 ಮತ್ತು 27ನೇ ವಾರ್ಡ್‌ನಲ್ಲಿ ಮನೆಮನೆಗಳಿಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.
ಹಿಂದಿನ ಚುನಾವಣೆಯಲ್ಲಿ ಜನರು ನೀಡಿದ ವ್ಯಾಪಕ ಬೆಂಬಲದಿಂದ ನಾನು ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯ ವಾಯಿತು. ಅದೇ ರೀತಿ ಈ ಬಾರಿ ಸಹ ಬೆಂಬಲ ನೀಡುವ ಮೂಲಕ ಮತ್ತೊಮ್ಮೆ ಜಯ ಗಳಿಸಲು ಸಹಕರಿಸಬೇಕು. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ನಂಜನಗೂಡಿನ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಭವಣೆ ನಿವಾರಣೆಗೆ ಕ್ರಮ ಕೈಗೊಳ್ಳುವ ಜತೆಗೆ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ನನೆಗುದಿಗೆ ಬಿದ್ದಿದ್ದ ಯುಜಿಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸರಕಾರದಿಂದ ಹೆಚ್ಚುವರಿ ಅನುದಾನ ಪಡೆದುಕೊಳ್ಳಲಾಗಿದೆ. ಇನ್ನು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಜತೆಗೆ ದೇಗುಲದಲ್ಲಿ ಬೆಳ್ಳಿ ರಥ ನಿರ್ಮಾಣ ಹಾಗೂ ಅತಿಥಿಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರಸಭೆ ಪಕ್ಷೇತರ ಸದಸ್ಯೆ ಮಂಗಳಮ್ಮ ಮಾತನಾಡಿ, ಶಾಸಕ ಬಿ.ಹರ್ಷವರ್ಧನ್ ಅವರು ನಗರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಆಡಳಿತಾರೂಢ ಬಿಜೆಪಿ ಸರ್ಕಾರ ಮಾದಿಗ ಸಮುದಾಯದ ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿ ನೀಡಿಕೆಗೆ ತೀರ್ಮಾನ ಕೈಗೊಂಡಿರುವುದರಿಂದ ಈ ಬಾರಿ ಸಮುದಾಯದ ಮುಖಂಡರ ಸಲಹೆಯಂತೆ ಬಿಜೆಪಿಯನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಚುನಾವಣಾ ಪ್ರಚಾರದಲ್ಲಿ ನಗರಸಭೆ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಸದಸ್ಯರಾದ ಮಂಗಳಮ್ಮ, ವಿಜಯಲಕ್ಷ್ಮೀ, ಮಹದೇವ ಪ್ರಸಾದ್, ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ಬಾಲಚಂದ್ರು, ಮಹೇಶ್ ಅತ್ತಿಖಾನೆ, ಕೃಷ್ಣಪ್ಪಗೌಡ, ರಾಮಚಂದ್ರ ಗೌಡ, ರಾಘವೇಂದ್ರ, ಕೃಷ್ಣ, ಪುನೀತ್, ಬಾಲರಾಜು, ಸಂತೋಷ, ಶಶಿ, ವಿನೋದ್, ಮಹದೇಶ್ ಮತ್ತಿತರರಿದ್ದರು.