

ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯ್ದೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಮೇಲೆ ನಡೆಸಲಾಗುವ ದೌರ್ಜನ್ಯ ಪ್ರಕರಣಗಳ ಕಾಯ್ದೆಯ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ದೌರ್ಜನ್ಯ ತಡೆ ಕಾಯ್ದೆಯಡಿ ವಿಧಿಸಲಾಗುವ ಶಿಕ್ಷೆ ಮತ್ತು ಪ್ರಕರಣಗಳ ತೀವ್ರತೆ ಬಗ್ಗೆ ವ್ಯಾಪಕವಾಗಿ ಅರಿವು ಉಂಟು ಮಾಡಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲ ಹೋಬಳಿ ವ್ಯಾಪ್ತಿಯಲ್ಲಿ ಆಯೋಜನೆ ಮಾಡಬೇಕು ಎಂದು ತಿಳಿಸಿದರು.
ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿ ಅವರ ಸಲಹೆ ಪಡೆಯಬೇಕು. ಸಮಿತಿ ಸೂಚಿಸುವ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಾಡು ಮಾಡಬೇಕು. ಕಾಯ್ದೆಯ ಕುರಿತು ಮನಮುಟ್ಟುವಂತೆ ತಿಳಿವಳಿಕೆ ನೀಡಬೇಕಿದೆ. ಕಾಯ್ದೆಯ ಪರಿಣಾಮಗಳಿಂದ ಆಗುವ ಕ್ರಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಆಳವಾಗಿ ತಿಳಿಸಿಕೊಡಬೇಕು ಎಂದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಅರಕಲವಾಡಿ ನಾಗೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಇರುವ ಕೆಲವು ಜೀತ ವಿಮುಕ್ತರಿಗೆ ಭೂಮಿ ಹಂಚಿಕೆ ಮಾಡಲಾಗಿಲ್ಲ. ಕೆಲವರಿಗೆ ಸಾಗುವಳಿ ಪತ್ರ ನೀಡಿದ್ದರೂ ಭೂಮಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಗುರುತಿನ ಚೀಟಿ ಇನ್ನಿತರ ತೊಡಕುಗಳನ್ನು ಪರಿಹರಿಸಿ ಜೀತವಿಮುಕ್ತರಿಗೆ ಲಭಿಸಬೇಕಿರುವ ಸೌಲಭ್ಯಗಳನ್ನು ತ್ವರಿತವಾಗಿ ನೀಡಬೇಕು ಎಂದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರತಿಕ್ರಿಯಿಸಿ, ಬಾಕಿ ಇರುವ ಜೀತ ವಿಮುಕ್ತರಿಗೆ ಭೂಮಿ ಹಂಚಿಕೆ, ಗುರುತಿನ ಚೀಟಿ, ಇನ್ನಿತರ ಸಂಬಂಧ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಕ್ರಮವಹಿಸಬೇಕು. ಸುಳ್ವಾಡಿ ಪ್ರಕರಣದ ಬಾಕಿ ಸಂತ್ರಸ್ತರಿಗೆ ಒದಗಿಸಬೇಕಿರುವ ಸೌಲಭ್ಯಗಳಿಗೆ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಸೂಚಿಸಿದರು.
ಸಮಿತಿಯ ಮತ್ತೋರ್ವ ಸದಸ್ಯರಾದ ದೊಡ್ಡರಾಯಪೇಟೆ ಸಿದ್ದರಾಜು ಮಾತನಾಡಿ, ದೌರ್ಜನ್ಯ ತಡೆ ಕಾಯ್ದೆ ಕುರಿತು ಬೀದಿ ನಾಟಕ, ಸಂವಾದ, ಕ್ರಾಂತಿಕಾರಿ ಗೀತೆಗಳಂತಹ ವೈವಿಧ್ಯಮಯ ಪ್ರಕಾರಗಳ ಮೂಲಕ ಜಾಗೃತಿ ಮೂಡಿಸಬೇಕು. ಕರಪತ್ರಗಳ ಮೂಲಕವು ವ್ಯಾಪಕವಾಗಿ ಎಲ್ಲ ಭಾಗಗಳಲ್ಲೂ ಕಾಯ್ದೆಯ ಬಗ್ಗೆ ಹೆಚ್ಚು ಪ್ರಚುರ ಪಡಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಯೋಜನಾ ನಿರ್ದೇಶಕ ಕಿರಣ್ ಪಡ್ನೇಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ನಂಜುಂಡೇಗೌಡ, ಕೇಶವಮೂರ್ತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಲಾರಿ ಎಚ್.ಎಸ್. ಬಿಂದ್ಯಾ, ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ, ಸಮಿತಿಯ ಸದಸ್ಯ ರಜನಿ ತಿವಾರಿ, ರಮೇಶ್ ಪ್ರಭು, ಕೇತಮ್ಮ, ಹೆಚ್.ಬಿ. ವೃಷಬೇಂದ್ರ, ಅರ್ಪಿತಾ ಇನ್ನಿತರರಿದ್ದರು.