ಪರಿಶಿಷ್ಟರ ಜಾತಿ ಗಣತಿಯಲ್ಲಿ ಲೋಪ ದೋಷ

Bhovi Shree
Published on

ಚಿತ್ರದುರ್ಗ: ಪರಿಶಿಷ್ಟರ ಜಾತಿ ಗಣತಿ ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಹಲವು ಲೋಪ, ದೋಷಗಳುಂಟಾಗಿವೆ. ಕೂಡಲೇ ಇದನ್ನು ಬಗೆಹರಿಸಿ ಗಣತಿ ಕಾರ್ಯ ನಡೆಸುವಂತೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದ ನಿಯೋಗ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಬೆಂಗಳೂರಿನಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತನಾಡಿದ ಶ್ರೀಗಳು, ಸಮೀಕ್ಷೆ ಆರಂಭವಾದ ದಿನದಿಂದಲೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಮಾಹಿತಿ ಪಡೆಯಲಾಗಿದೆ. ಈ ವೇಳೆ ಕೆಲವು ಲೋಪಗಳು ಕಂಡುಬಂದಿವೆ ಎಂದು ಆಧಾರ ಸಹಿತವಾಗಿ ವಿವರಿಸಿ ಪರಿಹರಿಸುವಂತೆ ಮನವಿ ಸಲ್ಲಿಸಿದರು.

ಜಾತಿ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಕಡ್ಡಾಯವಾಗಿ ಆಯ್ಕೆ ಮಾಡಿದ ನಂತರ ಉಪ ಜಾತಿಯನ್ನಾಗಿ ಭೋವಿ-ವಡ್ಡರ ಆಯ್ಕೆ ಮಾಡಬಹುದೆಂದು ಜನರಿಗೆ ತಪ್ಪು ಮಾಹಿತಿಯನ್ನು ಗಣತಿದಾರರು ನೀಡುತ್ತಿದ್ದಾರೆ. ಇದೇ ರೀತಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ವಲಸೆ ಹೋಗಿರುವ ಕುಟುಂಬದವರು ಆಧಾರ್ ಸಂಖ್ಯೆ ನೀಡಿ ಗಣತಿದಾರರಿಗೆ ವಿವರ ನೀಡಲು ಮುಂದಾದರೂ ಅವರನ್ನು ಪರಿಗಣಿಸುತ್ತಿಲ್ಲ. ಮಾಹಿತಿ ನೀಡಿದಾಗ ಫೋಟೊ ಬೇಕೆಂದು ಮಾಹಿತಿ ಪಡೆಯುತ್ತಿಲ್ಲ ಎಂದು ತಿಳಿಸಿದರು.

ಆಯೋಗವು ಪಡಿತರ ಚೀಟಿ, ಆಧಾರ್ ಕಾರ್ಡ್ ಯಾವುದಾದರೂ ಒಂದನ್ನು ಪಡೆದು ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಿದೆ. ಆದರೂ ಕೆಲವೆಡೆ ಸಮೀಕ್ಷೆದಾರರು ಕೇವಲ ಪಡಿತರ ಚೀಟಿ ಪಡೆಯುತ್ತಿದ್ದಾರೆ. ಆದರೆ, ಇದರಲ್ಲಿ ಹೆಸರಿಲ್ಲದವರ ಮಾಹಿತಿ ತಿರಸ್ಕರಿಸುತ್ತಿದ್ದಾರೆ ಎಂದು ವಿವರಿಸಿದರು.

ನವ ವಿವಾಹಿತರ, ಹೊಸ ಮನೆ ಕಟ್ಟಿಕೊಂಡವರ, ಬೇರೆ ಇರುವ ಕುಟುಂಬಗಳ ಮಾಹಿತಿಯನ್ನು ಗಣತಿದಾರರು ಪರಿಗಣಿಸುತ್ತಿಲ್ಲ. ಆಯೋಗವು ಭೋವಿ ಪದಕ್ಕೆ ಪರಿಶಿಷ್ಟ ಜಾತಿ ಕೋಡ್ ಸಂಖ್ಯೆ 23.1 ಎಂದು ಅವಕಾಶ ನೀಡಿದ್ದರೂ ಕೆಲವೆಡೆ ಎಸ್ಸಿ ಅಲ್ಲದವರೆಂದು ಸಮೀಕ್ಷೆಯಿಂದ ದೂರ ಉಳಿಯುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.

ಪಡಿತರ ಚೀಟಿ ಹೊಂದಿರುವ ಕೆಲ ಕುಟುಂಬದವರನ್ನು ಎಸ್ಸಿ ಇದ್ದರೂ ಎಸ್ಟಿ ಎಂದು ತೋರಿಸುತ್ತಿದ್ದಾರೆ. ಮತದಾನ ಚೀಟಿ ತೋರಿಸಿದರೂ ಸ್ಥಳೀಯ ನಿವಾಸಿಗಳಲ್ಲವೆಂದು ಆನ್‌ಲೈನ್‌ನಲ್ಲಿ ತೋರಿಸುತ್ತಿದೆ ಎಂದು ಗಣತಿದಾರರು ಹೇಳುತ್ತಿದ್ದಾರೆ. ವಿವಿಧ ಸಮಸ್ಯೆಗಳಿಂದಾಗಿ ಸಮೀಕ್ಷೆ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಆದ್ದರಿಂದ ಸಮೀಕ್ಷೆಯನ್ನು ಕೂಡಲೇ ನಿಲ್ಲಿಸಿ, ಗಣತಿದಾರರಿಗೆ ಮತ್ತೊಮ್ಮೆ ಒಂದು ದಿನದ ತರಬೇತಿ ನೀಡಿ ಆರಂಭಿಸಬೇಕು ಎಂದು ಕೋರಿದರು.

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಜಾತಿಯನ್ನು ಗುರುತಿಸಿದಾಗ ಉಪಜಾತಿ ಕಾಲಂನಲ್ಲಿ ಭೋವಿ ವಡ್ಡರಿಗೆ ಸಂಬಂಧಿಸಿದ ಯಾವ ಜಾತಿಯನ್ನು ತೋರಿಸದಂತೆ ಸದರಿ ಕಾಲಂ ಅನ್ನು ಅಭಿವೃದ್ಧಿಪಡಿಸಬೇಕು. ಹೀಗೆ ಅನೇಕ ನ್ಯೂನತೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸ್ವಾಮೀಜಿ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಏಕ ಸದಸ್ಯ ವಿಚಾರಣಾ ಆಯೋಗದ ನ್ಯಾ. ಡಾ.ಎಚ್.ಎನ್.ನಾಗಮೋಹನದಾಸ್ ಅವರಿಗೆ ಕರೆ ಮಾಡಿ ಎಲ್ಲಿಯೂ ಸಮಸ್ಯೆ, ಗೊಂದಲ ಉಂಟಾಗದಂತೆ ಸಮೀಕ್ಷೆ ನಡೆಸಲು ಸೂಚಿಸಿದರು.

ಭೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಮಾಜಿ ಅಧ್ಯಕ್ಷ ಸೀತಾರಾಮ, ಹಾವೇರಿಯ ರವಿ ಪೂಜಾರ್, ಭೋವಿ ನಿಗಮದ ಮಾಜಿ ಸದಸ್ಯ ಕಾಳಘಟ್ಟ ಹನುಮಂತಪ್ಪ, ಡಾ.ಗಂಗಾಧರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net