ಪರಿಶಿಷ್ಟರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ

24 YERRISWAMY 03
Published on

ಬಳ್ಳಾರಿ : ಪರಿಶಿಷ್ಟ ಸಮುದಾಯದವರ ಅಹವಾಲುಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಕಡೆಗಣಿಸದೇ ತಕ್ಷಣ ಸ್ಪಂದಿಸಿ, ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸಲು ಕ್ರಮವಹಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆಯ ಸಮಸ್ಯೆಗಳು, ಸಮಸ್ಯೆಗಳ ಪರಿಹರಿಸುವಿಕೆ, ಕಾನೂನಿನ ತಿಳುವಳಿಕೆಯನ್ನು ಮೂಡಿಸುವುದು ಈ ಸಭೆಯ ಉದ್ದೇಶವಾಗಿದೆ. ತಮ್ಮ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಮೂಲಕ ಸಮಸ್ಯೆ ಬಗೆಹರಿಸುವಿಕೆಗೆ ಸಹಕರಿಸಬೇಕು ಎಂದರು.
ಜಿಲ್ಲೆಯ ಪರಿಶಿಷ್ಟರ ಕಾಲನಿಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಶೌಚಾಲಯ ಸೇರಿ ಇತರೆ ಸೌಲಭ್ಯಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದು. ಅವುಗಳನ್ನು ಸ್ಥಳೀಯ ಶಾಸಕರ ಸಹಕಾರದ ಮೇರೆಗೆ ಹಂತ-ಹಂತವಾಗಿ ಪರಿಹರಿಸಲಾಗುವುದು ಎಂದರು.
ಎಸ್ಪಿ ಡಾ. ವಿ. ಜೆ. ಶೋಭಾರಾಣಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ದೌರ್ಜನ್ಯ, ಜಾತಿನಿಂದನೆ ಹಾಗೂ ಇತರೆ ಪ್ರಕರಣಗಳು ವರದಿಯಾದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕುಂದುಕೊರತೆಗಳಿದ್ದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು ಎಂದರು.
ಸ್ಮಶಾನ ಭೂಮಿ, ಬಗರ್‌ಹುಕುಂ ರೈತರ ಸಮಸ್ಯೆಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಸರ್ಕಾರಿ ಅಭಿಲೇಖಾಲಯ ಕಾರ್ಯಾಲಯದಲ್ಲಿ ಕಳೆದ 15 ವರ್ಷದ ಹಿಂದಿನ ಜಮೀನಿಗೆ ಸಂಬಂಧಿಸಿದ ದಾಖಲೆ ಕೇಳಿದರೆ, ಸಿಗುವುದಿಲ್ಲ ಎಂದು ಸಮಜಾಯಿಷಿ ಹಿಂಬರಹ ನೀಡಿ ಕಳುಹಿಸುತ್ತಾರೆ. ಬಳ್ಳಾರಿ ತಾಲೂಕಿನ ಕೆಲ ಗ್ರಾಮದಲ್ಲಿ ರುದ್ರಭೂಮಿ ಇಲ್ಲ, ಕೆಲವೆಡೆ ಇರುವ ರುದ್ರಭೂಮಿಗೆ ರಸ್ತೆ ಇಲ್ಲ. ಹೀಗೆ ಹಲವು ಕಾರಣಗಳಿಗೆ ಪರಿಶಿಷ್ಟರು ಹಳ್ಳ, ಕೊಳ್ಳ, ನದಿ ದಡದಲ್ಲೇ ಮೃತರ ಅಂತ್ಯ ಸಂಸ್ಕಾರ ಮಾಡಬೇಕಿದೆ. ಸಮಾಜ ಕಲ್ಯಾಣ ಮತ್ತು ಪೊಲೀಸ್ ಇಲಾಖೆಯಿಂದ ನಿಯಮಿತವಾಗಿ ಸಭೆ ನಡೆಸಬೇಕು. ಸ್ಮಶಾನ ಭೂಮಿ, ವಸತಿ, ಶಿಕ್ಷಣ ಈ ಮೂರು ಪರಿಶಿಷ್ಟರ ಪ್ರಮುಖ ಸಮಸ್ಯೆಗಳಾಗಿದ್ದು, ಇವುಗಳ ನಿವಾರಣೆಗೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಪರಿಶಿಷ್ಟ ಜಾತಿ ಹಾಗೂ ಸಮುದಾಯದವರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮತ್ತು ಇತರೆ ಸಮಸ್ಯೆಗಳ ಬಗ್ಗೆಯೂ ಗಮನಹರಿಸಬೇಕು ಎಂದು ದಲಿತ ಮುಖಂಡರು ಡಿಸಿಗೆ ಒತ್ತಾಯಿಸಿದರು.
ಬಳಿಕ ಡಿಸಿ ಪ್ರಶಾಂತ ಕುಮಾರ್ ಮಿಶ್ರಾ ಪ್ರತಿಕ್ರಿಯಿಸಿ, ಕೂಡಲೇ ಗ್ರಾಮಗಳಲ್ಲಿನ ತೊಂದರೆ ಸರಿಪಡಿಸಲು ಕ್ರಮವಹಿಸಬೇಕು ಎಂದು ತಹಶೀಲ್ದಾರರಿಗೆ ನಿರ್ದೇಶಿಸಿದರು. ಭೂ ದಾಖಲೆ ಸುರಕ್ಷಾ ಕಾಯ್ದೆಯಡಿ ಜಿಲ್ಲೆಯ 5 ತಾಲೂಕುಗಳ ಎಸಿ ಕಚೇರಿಗಳಲ್ಲಿನ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಿ ಶೇಖರಿಸಲಾಗುತ್ತಿದೆ. ಈಗಾಗಲೇ 25 ಲಕ್ಷ ದಾಖಲೆಗಳನ್ನು ಸ್ಕಾೃನ್ ಮಾಡಿ ಇಡಲಾಗಿದೆ. ಆರು ತಿಂಗಳೊಳಗಾಗಿ ಪ್ರತಿ ದಾಖಲೆಯು ಜೆರಾಕ್ಸ್ ಪ್ರತಿ ಲಭಿಸಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net