

ಯಳಂದೂರು: ಪರಿಶಿಷ್ಟ ಪಂಗಡಕ್ಕೆ ಸರ್ಕಾರ ಶೇ.7ರಷ್ಟು ಮೀಸಲಾತಿಯನ್ನು ನಿಗದಿಪಡಿಸಿರುವ ಕ್ರಮವನ್ನು ಸ್ವಾಗತಿಸಿ ತಾಲೂಕು ನಾಯಕ ಮಂಡಳಿ ವತಿಯಿಂದ ಶನಿವಾರ ಸಂಭ್ರಮಾಚರಣೆ ಮಾಡಲಾಯಿತು.
ಪಟ್ಟಣದ ಗಾಂಧಿ ಸರ್ಕಲ್ ಹಾಗೂ ಬಸ್ ನಿಲ್ದಾಣದಲ್ಲಿ ತಾಲೂಕು ನಾಯಕ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಮುಖಂಡ ಕಂದಹಳ್ಳಿ ಮಹೇಶ್ ಮಾತನಾಡಿ, ಮೀಸಲಾತಿ ವಿಚಾರವಾಗಿ ಕಳೆದ ಹಲವು ವರ್ಷಗಳಿಂದಲೂ ನಾಯಕ ಜನಾಂಗ ಹಾಗೂ ಇದಕ್ಕೆ ಬೆನ್ನುಲುಬಾಗಿ ವಾಲ್ಮೀಕಿ ಪೀಠದ ಸ್ವಾಮೀಜಿಗಳು ಹೋರಾಟ ನಡೆಸುತ್ತಿದ್ದರು. ಕಳೆದ 280 ದಿನಗಳಿಂದಲೂ ನಿರಂತರವಾಗಿ ಸ್ವಾಮೀಜಿಗಳು ಹೋರಾಟ ನಡೆಸುತ್ತಿದ್ದರು. ಇದರ ಫಲವಾಗಿ ಈಗ ರಾಜ್ಯ ಸರ್ಕಾರ ಶೇ.3ರಷ್ಟಿದ್ದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ವರ್ಗಕ್ಕೆ ಸೇರಿರುವ ಎಲ್ಲ ಜನಾಂಗಗಳಿಗೂ ಹೆಚ್ಚು ಅನುಕೂಲವಾಗಲಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲ ಸಚಿವರು, ಶಾಸಕರು, ಇದಕ್ಕೆ ಹೋರಾಟ ನಡೆಸಿದ ಎಲ್ಲ ಮುಖಂಡರಿಗೂ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ತಾಲೂಕು ನಾಯಕ ಮಂಡಳಿ ಅಧ್ಯಕ್ಷ ವೈ.ಎನ್.ಮುರುಳಿಕೃಷ್ಣ, ಮುಖಂಡರಾದ ಭೀಮಪ್ಪ, ವೈ.ವಿ. ಉಮಾಶಂಕರ್, ಅಗ್ರಹಾರ ರಂಗಸ್ವಾಮಿ, ಮಹೇಶ್, ನಾಗರಾಜು, ಕಿಟ್ಟಿ, ಚಂದ್ರಶೇಖರ್, ಉಮೇಶ್, ಬಳೇಚಂದ್ರು, ಅಂಬಳೆ ಶ್ರೀನಿವಾಸ್, ದೊರೆ ಇದ್ದರು.