ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯ ಮಂಜೂರು ಮಾಡಿ

19-SanduruP4
Published on

ಸಂಡೂರು: ತಾಲೂಕಿಗೆ ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಬೇಕೆಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಸರ್ಕಾರಕ್ಕೆ ಬುಧವಾರ ಮನವಿ ಮಾಡಿದರು.

ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿ, ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ವರದಿ ಪ್ರಕಾರ ಸಂಡೂರು ಅತ್ಯಂತ ಹಿಂದುಳಿದ ತಾಲೂಕಾಗಿದೆ. ತಾಲೂಕಿನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ವಹಿಸುವ 5 ಹಾಸ್ಟೆಲ್‌ಗಳಿವೆ. ಪರಿಶಿಷ್ಟ ಪಂಗಡದ 857ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಅನೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆತಿಲ್ಲ ಎಂದು ತಿಳಿಸಿದರು.

ಸಂಡೂರು ಗಣಿಬಾಧಿತ ಪ್ರದೇಶವಾಗಿದ್ದು, ಅದಿರು ಸಾಗಣೆ ಲಾರಿಗಳ ಓಡಾಟದಿಂದಾಗಿ ತಾಲೂಕಿನ ಗಡಿ ಗ್ರಾಮಗಳ ವಿದ್ಯಾರ್ಥಿಗಳು ತಾಲೂಕು ಕೇಂದ್ರಕ್ಕೆ ಬಂದು ಶಿಕ್ಷಣ ಪಡೆಯುವುದು ಕಷ್ಟವಾಗಿದೆ. ಚೋರುನೂರು ಹೋಬಳಿಯಲ್ಲಿರುವ ಸಣ್ಣ, ಅತಿಸಣ್ಣ ರೈತರು ಸುಗ್ಗಿಯ ನಂತರ ಜೀವನೋಪಾಯಕ್ಕಾಗಿ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ತೆರಳುತ್ತಾರೆ. ಆಗ ಮಕ್ಕಳನ್ನೂ ಕರೆದುಕೊಂಡು ಹೋಗುವುದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಚೀಂಚೋಳಿ ತಾಲೂಕಿನ ಸೂಲಿಪೇಟೆಯಲ್ಲಿ ಮುಚ್ಚಲ್ಪಟ್ಟ ವಿದ್ಯಾರ್ಥಿ ನಿಲಯವನ್ನು ಸಂಡೂರಿಗೆ ವರ್ಗಾಯಿಸುವ ಮೂಲಕ ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲ ಮಾಡಿಕೊಡಿ ಎಂದು ಶಾಸಕಿ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net