ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸುಪ್ರೀಂ ಕೋರ್ಟ್  ತೀರ್ಪು ಐತಿಹಾಸಿಕ
Published on

ಹಾಸನ: ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಹೋರಾಟ ಮಾಡಿಕೊಂಡು ಬಂದಿದ್ದೆವು, ಆದರ ಫಲವಾಗಿ ಆ.1ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದ್ದು, ಇದನ್ನು ದಲಿತ ಮಾದಿಗ ಚಲವಾದಿ ಸಂಘಟನೆಗಳ ಒಕ್ಕೂಟ ಸ್ವಾಗತಿಸುತ್ತದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಪಿ. ಶಂಕರ್‌ರಾಜ್ ತಿಳಿಸಿದರು.
ಬಹುದಿನಗಳ ಬೇಡಿಕೆ ಈಗ ಸುಪ್ರೀಂಕೋರ್ಟಿನಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ. ತಕ್ಷಣವೇ ರಾಜ್ಯ ಸರ್ಕಾರ ಗಮನಹರಿಸಿ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳಿಗೆ ಒಳಮಿಸಲಾತಿ ಕಲ್ಪಿಸುವ ವಿಚಾರ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠದಲ್ಲಿತ್ತು. ಇದರ 2005ರಲ್ಲಿ ನ್ಯಾಯಮೂರ್ತಿ ಸಂತೋಷ ಹೆಗಡೆ ಮತ್ತು 2020ರಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನೇತೃತ್ವದ ಪೀಠಗಳು ಭಿನ್ನ ತೀರ್ಪು ನೀಡಿದ್ದರಿಂದ ಮೀಸಲಾತಿ ಕಲ್ಪಿಸುವ ಪ್ರಕರಣ 7ಜನರ ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿತ್ತು ಎಂದರು.
ಸಾಕಷ್ಟು ವಾ-ವಿವಾದ ಆಲಿಸಿ ನ್ಯಾಯಾಲಯವು ಆ.1ರಂದು ಸಂವಿಧಾನ ಪೀಠವು ಒಳ ಮೀಸಲಾತಿ ಕಲ್ಪಿಸಲು ಇದ್ದಂತಹ ಬಿಕ್ಕಟ್ಟನ್ನು ನಿವಾರಣೆ ಮಾಡಿ ಒಳಮಿಸಲಾತಿ ಕಲ್ಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿರುವುದು ಅತ್ಯಂತ ಸಂತೋಷ ತಂದಿದೆ. ಈ ತೀರ್ಪನ್ನ ಸ್ವಾಗತಿಸಲಾಗುವುದು, ಆದರೆ ಸುಪ್ರೀಂ ಕೋರ್ಟ್ ಕೆನೆಪದರ ನೀತಿ ಜಾರಿಗೆ ಗೊಳಿಸಬೇಕೆಂಬ ತೀರ್ಪನ್ನ ಸ್ವಾಗತಿಸಲಾಗುವುದಿಲ್ಲ, ಇಂತಹ ತೀರ್ಪು ಹೊರಬರಲು ನ್ಯಾಯಾಂಗದಲ್ಲಿ ಮೀಸಲಾತಿ ಇಲ್ಲದೆ ಇರುವುದು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದ್ದು, ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಅಧಿವೇಶನವನ್ನು ಕರೆದು ಅಂಗೀಕರಿಸಬೇಕು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಇರುವಂತಹ ಬ್ಯಾಕ್ಲಾಗ್ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಬೇಕು. ಎಸ್ಸಿ ಎಸ್ಟಿ ಸಮುದಾಯಗಳ ಆದಾಯದ ಮಿತಿಯನ್ನು 10ಲಕ್ಷ ರೂಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮಾದಿಗ ಚಲವಾದಿ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಕೃಷ್ಣದಾಸ್, ಉಪಾಧ್ಯಕ್ಷ ನಾಗರಾಜ್ ಹೆತ್ತೂರ್, ಮಹೇಶ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net