

ಕೊಳ್ಳೇಗಾಲ: ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ರದ್ದು ಮಾಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದ್ದರಿಂದ ಪರಿಶಿಷ್ಟ ಜಾತಿ ಜನರು ಬಿಜೆಪಿ ಬೆಂಬಲಿಸುವಂತೆ ಶಾಸಕ ಎನ್.ಮಹೇಶ್ ಮನವಿ ಮಾಡಿದರು.
ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಮಾದೀಗ ಮೀಸಲಾತಿ ಹೋರಟ ಸಮಿತಿ ವತಿಯಿಂದ ಒಳ ಮೀಸಲಾತಿ ಜಾರಿ ಹಿನ್ನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿಯನ್ನು ಪರಿಶಿಷ್ಟ ಜನಾಂಗ ಒಪ್ಪಿಕೊಳ್ಳಬೇಕು. ಬಸವರಾಜ ಬೊಮ್ಮಾಯಿ ಸರ್ಕಾರ ಒಳ ಮೀಸಲಾತಿ ಆದೇಶದಲ್ಲಿ ಕೈಗೊಂಡ ತೀರ್ಮಾನ ಸರಿಯಾಗಿದೆ. ಈ ಬಗ್ಗೆ ಟೀಕೆ ಹಾಗೂ ಕೊಂಕು ಮಾತನಾಡುವುದು ಸರಿಯಲ್ಲ. ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಮುಂದೆ ಸರಿಪಡಿಸಿಕೊಳ್ಳೋಣ. 30 ವರ್ಷದ ಹೋರಾಟದ ಫಲವೇ ಒಳ ಮೀಸಲಾತಿ ಜಾರಿ ಮಾಡಿರುವುದು ಎಂದರು.
ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ರದ್ದು ಮಾಡುತ್ತೇವೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಯಾವ ರೀತಿ ರದ್ದು ಮಾಡಲು ಸಾಧ್ಯ? ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜನರು ಈ ಬಾರಿ ಯಾರಿಗೆ ಮತ ನೀಡಬೇಕು ಅನ್ನುವುದರ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಲೋಕೇಶ್, ಜಿಲ್ಲಾ ಕಾರ್ಯದರ್ಶಿ ರೇವಣ್ಣ, ಕುಂತೂರು ಶಕ್ತಿ ಕೇಂದ್ರ ಅಧ್ಯಕ್ಷ ಪ್ರಭುಸ್ವಾಮಿ, ನಗರಸಭೆ ಸದಸ್ಯ ಕವಿತಾ, ಮಾದಿಗ ಸಮಾಜದ ಮುಖಂಡರಾದ ಗೋಪಾಲ್, ವಕೀಲ ರಾಜೇಂದ್ರ, ಶಿವಮಲ್ಲು, ಬಸವರಾಜು(ದ್ವಾರಕೀ), ವಸಂತ್ ಇತರರಿದ್ದರು.