ಪರಿಶಿಷ್ಟ ಜಾತಿ ಕುಟುಂಬಗಳ ಒಳ ಮೀಸಲಾತಿ ಸಮೀಕ್ಷೆಯ ದಿನಾಂಕ ವಿಸ್ತರಣೆ

19 ckm 5
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿ ಮೀನಾ ನಾಗರಾಜ್ ಪರಿಶಿಷ್ಟ ಜಾತಿ ಕುಟುಂಬಗಳ ಒಳ ಮೀಸಲಾತಿ ಸಮೀಕ್ಷೆಯ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಎಸ್‌ಪಿ ವಿಕ್ರಮ ಅಮಟೆ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಎಸಿ ದೇವರಾಜ್, ಸಮಾಜ ಕಲ್ಯಾಣಾಧಿಕಾರಿ ಮಾಲತಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಹೆಚ್ಚು ಮಳೆಯಿಂದ ಹಾಗೂ ಬೇರೆ ಬೇರೆ ಕಾರಣಗಳಿಂದ ಜಿಲ್ಲೆಯಲ್ಲಿ ನಡೆಯಬೇಕಿದ್ದ ಪರಿಶಿಷ್ಟ ಜಾತಿ ಕುಟುಂಬಗಳ ಒಳ ಮೀಸಲಾತಿ ಸಮೀಕ್ಷೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಮಿತಿ ಶಿಫಾರಸ್ಸಿನಂತೆ ಗಣತಿದಾರರು ಮನೆ-ಮನೆ ಸಮೀಕ್ಷೆಗೆ ಬರುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಸಂಬAಧಿಸಿದ ಮಾಹಿತಿಯನ್ನು ನೀಡಬೇಕು ಎಂದರು.

ಮೊದಲ ಹಂತದ ಸಮೀಕ್ಷೆಯ ದಿನಾಂಕವನ್ನು ಮೇ ೫ ರಿಂದ ೨೫ ರವರೆಗೆ ವಿಸ್ತರಿಸಲಾಗಿದ್ದು, ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ನಡೆಸಲು ಜಿಲ್ಲೆಯ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ. ಗಣತಿದಾರರು ಮನೆ-ಮನೆಗೆ ಭೇಟಿ ನೀಡಿದಾಗ, ಕರ್ನಾಟಕದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಜಾತಿಗಳ ಮತ್ತು ಉಪಜಾತಿಗಳ ಮಾಹಿತಿಯನ್ನು ಸಮುದಾಯದವರು ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದರು.

ಆದಿಕರ್ನಾಟಕ, ಆದಿದ್ರಾವಿಡ, ಅದಿಆಂಧ್ರ ಎಂದು ನಮೂದಿಸಿದ್ದರೆ ಅಂಥವರು ಅದರ ಜೊತೆಗೆ ತಮ್ಮ ಉಪಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಜನಾಂಗದವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಹೊಂದಿರುವ ಸೌಲಭ್ಯಗಳು ಮುಂತಾದ ಸಾಮಾನ್ಯ ಮಾಹಿತಿಗಳು, ಆರ್ಥಿಕತೆಗೆ ಸಂಬAಧಿಸಿದ ಮಾಹಿತಿಗಳು, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ವೃತ್ತಿ, ಭೂಮಿಯ ಒಡೆತನ, ಮನೆ, ಆದಾಯ, ಮಾನವ ಅಭಿವೃದ್ಧಿ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯತೆ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಬೇಕು ಎಂದರು.

ಎರಡನೇ ಹಂತದ ಸಮೀಕ್ಷೆಯನ್ನು ಮೇ ೨೬ ರಿಂದ ೨೮ ರವರೆಗೆ ಮರು ನಿಗದಿಪಡಿಸಲಾಗಿದ್ದು, ಈ ಸಮೀಕ್ಷೆಯಲ್ಲಿ ಗುರುತಿಸಿರುವ ಮತಗಟ್ಟೆ ಪ್ರದೇಶದಲ್ಲಿ ಏರ್ಪಡಿಸಲಾಗುವ ವಿಶೇಷ ಶಿಬಿರಗಳಿಗೆ ಈಗಾಗಲೇ ಮೊದಲ ಹಂತದಲ್ಲಿ ಮಾಹಿತಿ ಸಲ್ಲಿಸದೇ ಅಥವಾ ಸಮೀಕ್ಷೆಗೆ ಒಳಪಡದೇ ಇರುವ ಪರಿಶಿಷ್ಟ ಜಾತಿಯವರು ತೆರಳಿ, ಗಣತಿದಾರರಿಗೆ ಜಾತಿ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.

ಮೂರನೇ ಹಂತದ ಸಮೀಕ್ಷೆಯಲ್ಲಿ ಆನ್‌ಲೈನ್ ಮೂಲಕ ವೆಬ್‌ಸೈಟ್‌ನಲ್ಲಿ ಸ್ವಯಂ ಘೋಷಣೆ ಮಾಡುವ ಸಮೀಕ್ಷೆಯನ್ನು ಮೇ ೧೯ ರಿಂದ ೨೮ ರವರೆಗೆ ವಿಸ್ತರಿಸಲಾಗಿದ್ದು, ಸ್ವಯಂ ಘೋಷಣೆಗೆ ಆಧಾರ್ ನಂಬರ್ ಹಾಗೂ ಜಾತಿ ಪ್ರಮಾಣ ಪತ್ರದ ಆರ್.ಡಿ. ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಿದರು.

ಸಮೀಕ್ಷೆಯನ್ನು ಕೈಗೊಳ್ಳುವುದಕ್ಕಾಗಿ ಒಟ್ಟು ೧,೫೩೪ ಶಿಕ್ಷಕರುಗಳನ್ನು ಗಣತಿದಾರರನ್ನಾಗಿ ಹಾಗೂ ೧೫೩ ಮುಖ್ಯ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. ಹೆಚ್ಚುವರಿಯಾಗಿ ೧೮೫ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.

೨೦೧೧ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೫೯,೨೯೬ ಪರಿಶಿಷ್ಟ ಜಾತಿಯ ಕುಟುಂಬಗಳು ಇವೆ. ಇಲ್ಲಿಯವರೆಗೆ ಒಟ್ಟು ೫೨,೯೩೪ ಪರಿಶಿಷ್ಟ ಜಾತಿ ಹಾಗೂ ೨,೪೩,೯೮೬ ಇತರೆ ಜಾತಿಯ ಕುಟುಂಬಗಳ ಒಟ್ಟು ೨,೯೬,೯೨೦ ಕುಟುಂಬಗಳ ಸಮೀಕ್ಷೆಯನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ (೯೯೦೨೧೯೮೩೦೦, ೯೪೮೧೩೫೯೦೦೦, ೯೪೮೩೦೦೪೦೦ ಹಾಗೂ ೯೪೮೦೮೪೩೦೨೮)ಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್‌ಪಿ ವಿಕ್ರಮ ಅಮಟೆ, ಉಪವಿಭಾಗಧಿಕಾರಿ ದೇವರಾಜ್, ಸಮಾಜ ಕಲ್ಯಾಣಾಧಿಕಾರಿ ಮಾಲತಿ ಉಪಸ್ಥಿತರಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಮುಂಗಾರು ಮಳೆಯು ಉತ್ತಮವಾಗಿ ಆಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಮುಂದೆ ಸಂಭವಿಸಬಹುದಾದ ಅತಿವೃಷ್ಟಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಅರಣ್ಯ ಇಲಾಖೆಗಳಲ್ಲಿ ಸಹಾಯವಾಣಿಗಳನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಮುಂದೆ ಸಂಭವಿಸಬಹುದಾದ ವಿಪತ್ತುಗಳನ್ನು ತಡೆಯಲು ವಿಪತ್ತು ನಿರ್ವಹಣಾ ತಂಡಗಳನ್ನು ಚಾಲ್ತಿಯಲ್ಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಅಗ್ನಿಶಾಮಕದಳ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಸಭೆಗಳನ್ನು ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ವಿಪತ್ತು ನಿರ್ವಹಣೆಗಾಗಿ ಅಗತ್ಯವಿರುವ ಪರಿಕರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದು ಅವುಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿ ಅಲ್ಲಿಯ ಜನರ ಪ್ರಾಣ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ನೀಲ ನಕ್ಷೆ ತಯಾರಿಸಲಾಗಿದೆ. ಅಗತ್ಯವಿರುವೆಡೆ ಗಂಜಿ ಕೇಂದ್ರಗಳನ್ನು ತೆರೆಯಲು ಸಹ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.

ಪೂರ್ವ ಮುಂಗಾರು ಮಳೆ ಜಿಲ್ಲೆಯಲ್ಲಿ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ, ತೋಟಗಾರಿಕಾ ಚಟುವಟಿಕೆಗಳಿಗೆ ಅಗತ್ಯವೆನಿಸಿರುವ ಪ್ರಮಾಣದಲ್ಲಿ ಬೀಜ, ಗೊಬ್ಬರ ದಾಸ್ತಾನಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net