ಪರಿಪೂರ್ಣತೆ ಬೆನ್ನಟ್ಟಿದರೆ, ಶ್ರೇಷ್ಠತೆ ಅನುಸರಿಸುತ್ತದೆ

mysore
Published on

ಮೈಸೂರು: ಪರಿಪೂರ್ಣತೆಯನ್ನು ಬೆನ್ನಟ್ಟಿದರೆ, ಶ್ರೇಷ್ಠತೆ ನಿಮ್ಮನ್ನು ಅನುಸರಿಸುತ್ತದೆ ಎಂದು ಮೈಸೂರು ಇನ್ಫೋಸಿಸ್‌ನ ಹಿರಿಯ ಉಪಾಧ್ಯಕ್ಷ ವಿನಾಯಕ ಹೆಗಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಮೃತ ವಿಶ್ವವಿದ್ಯಾಪೀಠಂನ ಮೈಸೂರು ಕ್ಯಾಂಪಸ್‌ನಲ್ಲಿ ಭಾನುವಾರ ಆಯೋಜಿಸಿದ್ದ 15ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನವನ್ನು ನಾಯಕತ್ವ, ಸಮಗ್ರತೆ, ನ್ಯಾಯಸಮ್ಮತತೆ ಮತ್ತು ಶ್ರೇಷ್ಠತೆ ಎಂದು ವ್ಯಾಖ್ಯಾನಿಸಿದ ಅವರು, ಯಶಸ್ಸು ಎಂಬುದು ಕಲ್ಪನೆ ಮತ್ತು ಗೆಲುವಿನ ಗೀಳು. ಇದು ವೇಗ, ಕಾರ್ಯಗತಗೊಳಿಸುವಿಕೆ ಮತ್ತು ಶ್ರೇಷ್ಠತೆಯ ಮೇಲೆ ಅವಲಂಬಿತವಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಪದವಿಯೇ ಅಂತ್ಯವಲ್ಲ, ಅದು ಆರಂಭ ಎಂದರು.

ಪದವೀಧರರು ಜೀವನದಲ್ಲಿ ಪಾಲಕರ ಪಾತ್ರವನ್ನು ನೆನಪಿಸಿಕೊಳ್ಳುವಂತೆಯೇ, ಗುರುಗಳ ಕೊಡುಗೆಯನ್ನು ಎಂದಿಗೂ ಮರೆಯಬಾರದು. ಘಟಿಕೋತ್ಸವವು ಕೇವಲ ಉನ್ನತ ಅಧ್ಯಯನ ಅಥವಾ ವೃತ್ತಿಜೀವನ ಪ್ರವೇಶಿಸುವುದಲ್ಲ. ಬದಲಾಗಿ ನಿಜ ಜೀವನಕ್ಕೆ ಕಾಲಿಡುವುದಾಗಿರುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಸಾಧನೆಯಷ್ಟೇ ಸ್ಥಿತಿ ಸ್ಥಾಪಕತ್ವ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ವಿಚಾರಗಳಿಗೆ ಮುಕ್ತರಾಗಿರುವ, ತಂಡದ ಕೆಲಸಕ್ಕೆ ಬೆಲೆ ಕೊಡಬೇಕು. ಸರಿಯಾದ ಗೆಳೆಯರ ಸಹವಾಸವನ್ನು ಆಯ್ಕೆ ಮಾಡಿಕೊಳ್ಳಬೇಕು. ಜೀವನಪರ್ಯಂತ ಕಲಿಯುವವರಾಗಿ ಉಳಿಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾಲಾತೀತ ಜ್ಞಾಪನೆಯೊಂದಿಗೆ ಪದವೀಧರರು ತಮ್ಮ ಮಾತೃಭೂಮಿಗೆ ಹೆಮ್ಮೆ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಬೇಕು ಎಂದರು.

ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪೂರ್ಣಾಮೃತಾನಂದ ಪುರಿ ಮಾತನಾಡಿ, ಜೀವನವು ನಿಜವಾದ ಶಕ್ತಿ. ಮೂರು ದೈವಿಕ ಶಕ್ತಿಗಳಾದ ಇಚ್ಛಾಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾ ಶಕ್ತಿಯನ್ನು ಸಮನ್ವಯಗೊಳಿಸುವುದರಲ್ಲಿದೆ. ಕೇವಲ ಮಾಹಿತಿ ಎಂದಿಗೂ ಸಾಕಾಗುವುದಿಲ್ಲ. ಅದು ಆಂತರಿಕ ಪರಿವರ್ತನೆಗೆ ಕಾರಣವಾಗಬೇಕು ಎಂದು ಹೇಳಿದರು.

ಗುರುಕುಲ ಸಂಪ್ರದಾಯದ ಕುರಿತು ಮಾತನಾಡಿದ ಅವರು, ಶಿಕ್ಷಣವು ಕೇವಲ ಜ್ಞಾನವನ್ನು ಒದಗಿಸುವ ಕ್ರಿಯೆಯಲ್ಲ. ಬದಲಾಗಿ ಅದು ವ್ಯಕ್ತಿತ್ವ ರೂಪಿಸವ ಮತ್ತು ಮೌಲ್ಯ ತುಂಬುವ ಕ್ರಿಯೆಯಾಗಿದೆ. ನಿಜವಾದ ಶಿಕ್ಷಣ ಹಾಗೂ ಬುದ್ಧಿವಂತಿಕೆಯು ವಿನಮ್ರತೆ ತರುತ್ತದೆ ಎಂದರು.

ಭಗವದ್ಗೀತೆಯನ್ನು ಉಲ್ಲೇಖಿಸಿದ ಅವರು, ಪ್ರತಿಯೊಬ್ಬ ವ್ಯಕ್ತಿಯು ಎದುರಿಸುವ ಆಂತರಿಕ ಯುದ್ಧ ಮತ್ತು ಅಜ್ಞಾನ ಜಯಿಸಲು ಬೇಕಿರುವ ಅರಿವಿನ ಅಗತ್ಯವಾಗಿದೆ. ಪದವೀಧರರು ಮೌಲ್ಯಾಧಾರಿತ ಶಿಕ್ಷಣವನ್ನು ಸಾಕಾರಗೊಳಿಸಬೇಕು. ಕರುಣೆ ಹಾಗೂ ಜವಾಬ್ದಾರಿಯುತ ನಾಯಕರಾಗಿ ಮುಂದುವರಿಯಬೇಕು. ವ್ಯಕ್ತಿತ್ವಗಳು ಪದವಿಗಳಿಗಿಂತ ಬಹಳ ಮುಖ್ಯವಾಗಿದೆ ಎಂದು ಹೇಳೀದರು.

ಅಮೃತ ವಿಶ್ವವಿದ್ಯಾಪೀಠಂನ ಕುಲಸಚಿವ ಡಾ.ಪಿ.ಅಜಿತ್ ಕುಮಾರ್ ಮಾತನಾಡಿ, ಎಲ್ಲ ಸಂಶೋಧನೆ ಮತ್ತು ಶಿಕ್ಷಣವು ಸಹಾನುಭೂತಿಯಲ್ಲಿ ಬೇರೂರಿರಬೇಕು. ಸಮಾಜಕ್ಕೆ ಸೇವೆ ಸಲ್ಲಿಸುವ ಗುರಿ ಹೊಂದಿರಬೇಕು ಎಂದರು.

ಪದವಿ ಎಂದರೆ ಕೇವಲ ಜ್ಞಾನದ ಗುರುತಿಸುವಿಕೆ ಅಲ್ಲ. ಆ ಜ್ಞಾನವನ್ನು ಬುದ್ಧಿವಂತಿಕೆ ಮೂಲಕ ನಿಸ್ವಾರ್ಥವಾಗಿ ಬಳಸುವ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.

ಪಿಎಚ್.ಡಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯ 661 ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು. 61 ವಿದ್ಯಾರ್ಥಿಗಳಿಗೆ ರ‌್ಯಾಂಕ್ ಹಾಗೂ ಪದಕ ಪ್ರದಾನ ಮಾಡಲಾಯಿತು. 13 ಚಿನ್ನದ ಪದಕ ಹಾಗೂ 12 ಬೆಳ್ಳಿ ಪದಕಗಳನ್ನು ರ‌್ಯಾಂಕ್ ವಿಜೇತರಿಗೆ ವಿತರಿಸಲಾಯಿತು.

ಅಮೃತ ವಿಶ್ವವಿದ್ಯಾಪೀಠಂನ ಪರೀಕ್ಷಾ ನಿಯಂತ್ರಕ ಡಾ.ಪಿ.ಕೃಷ್ಣಕುಮಾರ್, ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಸಂಚಾಲಕ ಬ್ರಹ್ಮಚಾರಿ ಮುಕ್ತಿಧಾಮೃತ ಚೈತನ್ಯ, ಅಸೋಸಿಯೇಟ್ ಡೀನ್ ಡಾ. ಶೇಖರ್ ಬಾಬು, ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net