ಪರಿಪೂರ್ಣ ವ್ಯಕ್ತಿತ್ವ ಶಿಕ್ಷಣದ ಗುರಿಯಾಗಲಿ, ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ವಾರ್ಷಿಕೋತ್ಸವದಲ್ಲಿ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಸಲಹೆ

19 Nela Ph 01 Prathibha Purashkara
Published on

ನೆಲಮಂಗಲ: ಉದ್ಯೋಗ ಪಡೆಯುವುದಷ್ಟೇ ಶಿಕ್ಷಣದ ಗುರಿಯಲ್ಲ. ಪರಿಪೂರ್ಣ ವ್ಯಕ್ತಿತ್ವ ಹಾಗೂ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಶಿಕ್ಷಣ ಕಲಿಸಬೇಕು ಎಂದು ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿಯ ವಿ.ವಿ.ಎಸ್ ಸಮುದಾಯ ಭವನದಲ್ಲಿ ಭಾನುವಾರ ಏರ್ಪಾಡಾಗಿದ್ದ ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ 7ನೇ ವಾರ್ಷಿಕೋತ್ಸವದಲ್ಲಿ ಪ್ರತಿಭಾ ಪುರಸ್ಕಾರ, ಹಾಗೂ ಸಾಧನಕರಿಗೆ ಸನ್ಮಾನ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳು ಕಲ್ಪನಾಶಕ್ತಿ ಬೆಳೆಸಿಕೊಳ್ಳಬೇಕು. ದೇಶದ ತಳಹದಿ, ಮಾನವೀಯ ಮೌಲ್ಯಗಳನ್ನು ಪ್ರಶ್ನಿಸುವ ಅಪಾಯಕಾರಿ ಸನ್ನಿವೇಶ ಭಾರತೀಯರಿಗೆ ಎದುರಾಗಿದೆ. ಪ್ರತಿಯೊಬ್ಬರೂ ಸ್ವ-ವಿಮರ್ಶೆ ಮಾಡಿಕೊಂಡು ಸಮಾನತೆ, ಸಾಮಾಜಿಕ ನ್ಯಾಯ, ವೈಜ್ಞಾನಿಕ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು. ಟಿವಿ, ಮೊಬೈಲ್ ಹಾಗೂ ದುಶ್ಚಟಗಳಿಂದ ಮಕ್ಕಳನ್ನು ದೂರವಿರಿಸಬೇಕು. ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ಕಿಂಚಿತ್ತಾದರೂ ಕೊಡುಗೆ ನೀಡಬೇಕು ಎಂದರು.

ಗುರುಗುಂಡ ಬ್ರಹ್ಮೇಶ್ವರ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಅನ್ನ ನೀಡುವ ಶ್ರೇಷ್ಠ ಕಾಯಕ ಸಮುದಾಯದ್ದಾಗಿದೆ. ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಆರಂಭ ಮಾಡಿ 7 ವರ್ಷದಿಂದ ಸಮಾಜದ ಏಳಿಗೆಗೆ ಶ್ರಮಿಸಲಾಗುತ್ತಿದೆ. ಸಮುದಾಯಕ್ಕೆ ವಿಶೇಷ ಸ್ಥಾನಮಾನವಿದ್ದು ಸಮುದಾಯದ ಮಹತ್ವ ಹಾಗೂ ಇತಿಹಾಸವನ್ನು ಇಂದಿನ ಪೀಳಿಗೆಯವರಿಗೆ ತಿಳಿಸಿಕೊಡಬೇಕು ಎಂದರು.

ಬದಲಾವಣೆಗಾಗಿ 13 ಮಂದಿ: ಇತ್ತೀಚೆಗೆ ನಡೆದ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಬದಲಾವಣೆ ದೃಷ್ಠಿಯಿಂದ 13 ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಚುನಾವಣೆಗೆ ಸ್ಪರ್ಧಿಸಿದ್ದವರು ಸಮುದಾಯದ ಮತದಾರರಿಗೆ ಹಣ ಕೊಟ್ಟಿರುವ ಮಾಹಿತಿ ಇದೆ. ಹಣ ಸಂಗ್ರಹಿಸುವ ಉದ್ದೇಶದಿಂದ ಸಂಘದ ನಿರ್ದೇಶಕರಾಗುತ್ತಿದ್ದಾರೆಯೇ ಹೊರತು ಸಮುದಾಯ ಅಭಿವೃದ್ಧಿಯನ್ನು ಮನದಲ್ಲಿಟ್ಟುಕೊಂಡಿಲ್ಲ ಎಂದು ಶ್ರೀ ನಂಜಾವಧೂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ವೀರಶೈವ ಮಠಕ್ಕೆ ಸೇರಿದ 15 ಮೆಡಿಕಲ್ ಕಾಲೇಜು ಹಾಗೂ 25ಕ್ಕೂ ಹೆಚ್ಚು ಇಂಜಿನಿಯರ್ ಕಾಲೇಜುಗಳು ಇವೆ. ಮಕ್ಕಳಿಗೆ ಊಟ, ವಸತಿ, ಆಶ್ರಯ ನೀಡಿ ಉತ್ತಮ ಪ್ರಜೆಯನ್ನಾಗಿ ರೂಪಿಸಲಾಗುತ್ತಿದೆ. ಇಂಥ ಕೆಲಸ ಒಕ್ಕಲಿಗರ ಸಂಘದಿಂದ ಆಗಬೇಕಿದೆ ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು, ಇತ್ತಿಚೆಗೆ ನಡೆದ ಕಸಾಪ ಚುನಾವಣೆ ಹಾಗೂ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಜಯಶೀಲರಾದವರನ್ನು ಸನ್ಮಾನಿಸಲಾಯಿತು. ಸಂಘದ 2022ರ ದಿನಚರಿ ಬಿಡುಗಡೆ ಮಾಡಲಾಯಿತು.

ಬಸವನಹಳ್ಳಿ ಶಿವಾನಂದಾಶ್ರಮದ ಶ್ರೀ ರಮಣಾನಂದ ಸ್ವಾಮೀಜಿ, ಬೆಂ.ಗ್ರಾಮಾಂತರ ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಟ್ರಸ್ಟ್‌ನ ಅಧ್ಯಕ್ಷ ಚನ್ನಯ್ಯ, ಉಪಾಧ್ಯಕ್ಷ ರಾಮಸ್ವಾಮಿ, ಖಜಾಂಚಿ ಎನ್.ಎಚ್.ಸುಂದರೇಶ್, ಸಂಚಾಲಕರಾದ ರಂಗಪ್ಪ, ಶ್ರೀಧರ್, ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಚ್.ಜಿ.ರಾಜು, ಮಾಜಿ ಅಧ್ಯಕ್ಷ ಕೆ.ಎನ್.ವನರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಟಿಎಪಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಆರ್.ಪ್ರಮೋದ್‌ಕುಮಾರ್, ವೈದ್ಯ ವಿನಯ್‌ಕುಮಾರ್, ಗ್ರಾಪಂ ಉಪಾಧ್ಯಕ್ಷ ಸೈದಾಮಿಪಾಳ್ಯ ರಮೇಶ್, ಮುಖಂಡರಾದ ಎಚ್.ಬಿ.ಮಂಜುನಾಥ್, ಪೆಮ್ಮನಹಳ್ಳಿ ದೇವರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net