ಪರಿತ್ಯಕ್ತ ಮಕ್ಕಳಿಗೂ ಸಿಗಲಿ ವಾತ್ಸಲ್ಯ : ಜಿಲ್ಲಾಧಿಕಾರಿ ಆರ್.ಲತಾ ಆಶಯ

8CBP4DC
Published on

ಚಿಕ್ಕಬಳ್ಳಾಪುರ : ಪರಿತ್ಯಕ್ತ ಮಕ್ಕಳಿಗೂ ಪ್ರೀತಿ, ವಾತ್ಸಲ್ಯದ ಜತೆಗೆ ನ್ಯಾಯಯುತ ಸವಲತ್ತುಗಳ ಸಿಗಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ನಗರದ ಕಂದವಾರಪೇಟೆಯಲ್ಲಿನ ಕಮಲಮ್ಮ, ಸಿ.ವಿ.ವೆಂಕಟರಾಯಪ್ಪ ಸ್ಮಾರಕ ವಿಶೇಷ ದತ್ತು ಸಂಸ್ಥೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಗುರುವಾರ ಹಮ್ಮಿಕೊಂಡಿದ್ದ ಪರಿತ್ಯಕ್ತ ಮಕ್ಕಳಿಗೆ ನಾಮಕರಣ ಮಹೋತ್ಸವದಲ್ಲಿ ಮಾತನಾಡಿದರು.

ಯಾವುದೇ ಕಾರಣಕ್ಕೂ ಅನಾಥ, ಪರಿತ್ಯಕ್ತ, ಒಪ್ಪಿಸಲ್ಪಟ್ಟ ಮಕ್ಕಳು ಹಕ್ಕುಗಳಿಂದ ವಂಚಿತರಾಗಬಾರದು. ಎಲ್ಲರಂತೆ ಕುಟುಂಬ ವಾತಾವರಣದಲ್ಲಿ ಬೆಳೆಯುವಂತಾಗಲು ದತ್ತು ಸಂಸ್ಥೆಗಳು ತಂದೆ-ತಾಯಿಯ ಪ್ರೀತಿ ವಾತ್ಸಲ್ಯ ನೀಡಬೇಕು ಎಂದರು.

ಬೇಡವಾದ ಮಗುವನ್ನು ಎಲ್ಲೋ ಬಿಟ್ಟು ಹೋಗುವ ಬದಲು ಸರ್ಕಾರಿ ಆಸ್ಪತ್ರೆಯಲ್ಲಿಟ್ಟಿರುವ ‘ಮಮತೆಯ ತೊಟ್ಟಿಲು’ ಮೂಲಕ ದತ್ತು ಸಂಸ್ಥೆಗೆ ಒಪ್ಪಿಸಬೇಕು. ಇದರಿಂದ ಆ ಮಕ್ಕಳ ಕಾಳಜಿಯನ್ನು ಸರ್ಕಾರವೇ ವಹಿಸಿಕೊಂಡು ಕಾನೂನು ರೀತಿಯಲ್ಲಿ ದತ್ತು ಮಗು ಪಡೆಯಲು ನೋಂದಣಿ ಮಾಡಿಸಿಕೊಂಡ ದಂಪತಿಗೆ ನೀಡಲಾಗುತ್ತದೆ ಎಂದು ವಿವರಿಸಿದರು.

ಯಾವುದೇ ಮಗುವನ್ನು ಅನಾಥವನ್ನಾಗಿಸದೇ ಕುಟುಂಬದ ವಾತಾವರಣದಲ್ಲಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎನ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮಹಮ್ಮದ್ ಉಸ್ಮಾನ್, ಕೆ.ವಿ.ಟ್ರಸ್ಟ್‌ನ ಸದಸ್ಯರಾದ ಮುನಿಯಪ್ಪ, ವಿಶೇಷ ದತ್ತು ಸಂಸ್ಥೆಯ ಸಂಯೋಜಕ ನಾರಾಯಣಸ್ವಾಮಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net