ಪರಿತ್ಯಕ್ತ ಮಕ್ಕಳ ಸಾಲಿಗೆ ಗಂಡುಶಿಶುಗಳ ಸೇರ್ಪಡೆ ; ದತ್ತು ಸ್ವೀಕಾರ ಕೇಂದ್ರದಲ್ಲಿ ನವಜಾತ ಮಕ್ಕಳು; ಲಾಕ್‌ಡೌನ್ ವೇಳೆ 3 ಪ್ರಕರಣ ಪತ್ತೆ

dattu kendra
Published on

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ: ಲಿಂಗಭೇದ ಕಾರಣಕ್ಕಾಗಿ ನವಜಾತ ಹೆಣ್ಣು ಶಿಶುಗಳನ್ನು ದೂರ ಮಾಡುವ ಪ್ರಕರಣ ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಗಂಡುಶಿಶುಗಳ ಪ್ರಕರಣಗಳು ಹೆಚುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಕರೊನಾ ಲಾಕ್‌ಡೌನ್ ವೇಳೆ ಗ್ರಾಮಾಂತರ ಜಿಲ್ಲೆಯಲ್ಲಿ 3 ಪ್ರಕರಣ ಪತ್ತೆಯಾಗಿವೆ. ದೊಡ್ಡಬಳ್ಳಾಪುರದಲ್ಲಿ 2 ಹಾಗೂ ನೆಲಮಂಗಲದಲ್ಲಿ 1 ನವಜಾತ ಶಿಶುವನ್ನು ರಕ್ಷಿಸಿರುವ ಜಿಲ್ಲಾ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಮೂರು ಮಕ್ಕಳನ್ನು ದತ್ತು ಕೇಂದ್ರದಲ್ಲಿ ದಾಖಲಿಸಿದೆ.

ಹೆಣ್ಣು ಭ್ರೂಣ ಹತ್ಯೆ, ನವಜಾತ ಹೆಣ್ಣುಮಗುವನ್ನು ಎಲ್ಲೆಂದರಲ್ಲಿ ಬಿಟ್ಟುಹೋಗುವ ಕೆಟ್ಟ ಚಾಳಿ ಮುಂದುವರಿದಿದೆ. ಇದರ ನಡುವೆ ನವಜಾತ ಗಂಡು ಶಿಶುಗಳನ್ನು ಅನಾಥವಾಗಿಸುವ ಪ್ರಕರಣ ಕಂಡುಬರುತ್ತಿದೆ. ಇತ್ತೀಚಿಗೆ ಗ್ರಾಮಾಂತರ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇದೇ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

3 ವರ್ಷದಲ್ಲಿ 16 ಪ್ರಕರಣ: ಮದುವೆ ಮುನ್ನ ಗರ್ಭಧರಿಸುವುದು, ಕೌಟುಂಬಿಕ ಕಲಹ, ಮರುಮದುವೆ ಪ್ರಕರಣಗಳು, ಅಂಗವಿಕಲ ಮಗುವಿನ ಜನನ, ಅಕ್ರಮ ಸಂಬಂಧದಿಂದ ಜನಿಸಿದ ಮಗು, ಈಗಾಗಲೇ ನಾಲ್ಕೈದು ಮಕ್ಕಳಿರುವುದು ಇಂಥ ಸಂದರ್ಭದಲ್ಲಿ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ 16 ಇಂಥ ಪ್ರಕರಣಗಳು ಕಂಡುಬಂದಿದ್ದು, ಎಲ್ಲ ಮಕ್ಕಳನ್ನು ರಕ್ಷಿಸಿ ದತ್ತು ಸ್ವೀಕಾರ ಕೇಂದ್ರಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2018-19ರಲ್ಲಿ 5 ಶಿಶುಗಳನ್ನು ರಕ್ಷಿಸಿದ್ದು, ಇದರಲ್ಲಿ 2 ಗಂಡು ಹಾಗೂ 3 ಹೆಣು ್ಣಶಿಶುಗಳಿವೆ. 2019-20ರಲ್ಲಿ 5 ಗಂಡು ಮಗು ಹಾಗೂ 2 ಹೆಣ್ಣು ಶಿಶುಗಳ ರಕ್ಷಣೆ ಮಾಡಲಾಗಿದೆ. ಅದೇ ರೀತಿ 2020-21ರಲ್ಲಿ 3 ಗಂಡು ಹಾಗೂ 1 ಹೆಣ್ಣು ಪರಿತ್ಯಕ್ತ ಶಿಶುಗಳು ಪತ್ತೆಯಾಗಿವೆ.

2 ದತ್ತು ಕೇಂದ್ರಗಳು: ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ 2 ದತ್ತು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನೆಲಮಂಗಲದ ಪರಸ್ಪರ ದತ್ತುಕೇಂದ್ರ ಹಾಗೂ ಹೊಸಕೋಟೆಯ ವಿಶ್ರಾಂತಿ ದತ್ತು ಕೇಂದ್ರಗಳಿದ್ದು, ಪ್ರಸ್ತುತ 7 ಮಕ್ಕಳೂ ಆಸರೆಯಲ್ಲಿವೆ. ಲಾಕ್‌ಡೌನ್ ವೇಳೆ ರಕ್ಷಿಸಿದ 3 ಮಕ್ಕಳಲ್ಲಿ 2 ಶಿಶು ಆಗ ತಾನೇ ಜನಿಸಿದ ಶಿಶುಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರೊನಾ ಲಾಕ್‌ಡೌನ್ ಕಾಲಾವಧಿಯಲ್ಲಿ ಜಿಲ್ಲೆಯಲ್ಲಿ 3 ಪರಿತ್ಯಕ್ತ ಗಂಡುಶಿಶುಗಳು ಪತ್ತೆಯಾಗಿವೆ. ಮೂರು ಮಕ್ಕಳಿಗೂ ಕೋವಿಡ್-19 ಟೆಸ್ಟ್ ಮಾಡಲಾಗಿದ್ದು, ಎಲ್ಲ ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಮಕ್ಕಳನ್ನು ದತ್ತು ಕೇಂದ್ರದಲ್ಲಿ ರಕ್ಷಿಸಲಾಗಿದೆ. ಪುಷ್ಪಾ ರಾಯರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಪರಿತ್ಯಕ್ತ ಶಿಶುಗಳ ಪತ್ತೆ ಪ್ರಕರಣ ತೀರ ಕಡಿಮೆ ಇದೆ. ಗಂಡು-ಹೆಣ್ಣು ಎರಡೂ ಲಿಂಗತ್ವದ ಮಕ್ಕಳನ್ನು ರಕ್ಷಿಸಲಾಗಿದೆ. ಲಾಕ್‌ಡೌನ್ ವೇಳೆ ರಕ್ಷಿಸಿದ ಮೂರು ಪ್ರಕರಣಗಳಲ್ಲಿ ಗಂಡುಶಿಶುಗಳು ಪತ್ತೆಯಾಗಿವೆ. ಎನ್.ಹೇಮಾವತಿ, ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net