

ಸಾಗರ: ನೇಪಥ್ಯಕ್ಕೆ ಸರಿಯುತ್ತಿರುವ ಕಲೆಗಳಿಗೂ ಸರ್ಕಾರ ಪ್ರೋತ್ಸಾಹ ನೀಡಿ ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಕಾರ್ಯದಲ್ಲಿ ಯುವ ಕಲಾವಿದರ ಸಹಕಾರ ದೊಡ್ಡದಾಗಿದೆ ಎಂದು ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕ ವೇಣುಗೋಪಾಲ್ ಹೇಳಿದರು.
ನಗರದ ಪರಿಣಿತಿ ಕಲಾಕೇಂದ್ರ ಆಯೋಜಿಸಿದ್ದ 8ನೇ ವರ್ಷದ ರಾಷ್ಟ್ರೀಯ ನೃತ್ಯ ಸಂಗೀತೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿ, ಪ್ರಾದೇಶಿಕ ಕಲೆಗಳು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಚರಿಸಬೇಕು. ಆಗ ಮಾತ್ರ ಅದನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಭಾರತೀಯ ಸಾಂಸ್ಕೃತಿಕ ಕಲೆಗಳಿಗೆ ವಿದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆ ಇದೆ. ನಮ್ಮ ದೇಶದ ಕಲೆಗಳಲ್ಲಿ ಏಕತಾನತೆಗಿಂತ ವೈವಿಧ್ಯತೆಯನ್ನು ಹೆಚ್ಚು ಕಾಣುತ್ತೇವೆ. ಒಂದೇ ವೇದಿಕೆಯಲ್ಲಿ ರಾಷ್ಟ್ರೀಯ ನೃತ್ಯೋತ್ಸವವನ್ನು ನಡೆಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಇಲ್ಲಿ ಕರೆಸಿ, ಅವರನ್ನು ಕಲಾ ಪ್ರೇಕ್ಷಕರಿಗೆ ಪರಿಚಯಿಸುವ ಕೆಲಸವನ್ನು ಪರಿಣಿತಿ ಕಲಾಕೇಂದ್ರ ಮಾಡುತ್ತಿದೆ ಎಂದರು.
ಕಲಾಪೋಷಕ ಟಿ.ವಿ.ಪಾಂಡುರಂಗ ಮಾತನಾಡಿ, ರಾಮಾಯಣ ಮತ್ತು ಮಹಾಭಾರತದ ಕಥಾನಕಗಳನ್ನು ನೃತ್ಯದ ಮೂಲಕ ಸುಲಭವಾಗಿ ಜನರಿಗೆ ಪರಿಚಯಿಸುವ ಮತ್ತು ಅದನ್ನು ತಲುಪಿಸುವ ಕೆಲಸ ಇಲ್ಲಿ ನಡೆದಿದೆ. ಮನುಷ್ಯನ ಮನಸ್ಸಿಗೆ ಆನಂದವನ್ನು ನೀಡುವ ಶಕ್ತಿ ಕಲೆಗೆ ಮಾತ್ರ ಇದೆ. ಕಲೆ ಮತ್ತು ಕಲಾವಿದ ದೇಶದ ಆಸ್ತಿ. ಸಮಾಜ ಆರೋಗ್ಯಕರವಾಗಿರಬೇಕಾದರೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು ಎಂದರು.
ಪರಿಣಿತಿ ಕಲಾ ಕೇಂದ್ರದ ಮುಖ್ಯಸ್ಥ ವಿದ್ವಾನ್ ಎಂ.ಗೋಪಾಲ್ ಮಾತನಾಡಿ, ನಮ್ಮ ಕಲಾಕೇಂದ್ರ ಅನೇಕ ರಂಗಪ್ರವೇಶಗಳು ಯಶಸ್ವಿಯಾಗಿ ನಡೆಸಿದೆ. ನಮ್ಮ ಸಂಘಟನೆ ಸಮಾಜಮುಖಿಯಾಗಿಯೂ ತೊಡಗಿಕೊಂಡಿದೆ. ಕಲಾವಿದರಿಗೆ ಶಿಷ್ಯವೇತವನ್ನು ನೀಡುತ್ತಿದೆ. ಕರ್ನಾಟಕದ ಭೂಪಟದಲ್ಲಿ ಕಲಾ ಪ್ರಪಂಚವನ್ನು ಗಮನಿಸಿದರೆ ಸಾಗರದ ಕೊಡುಗೆ ಬಹು ದೊಡ್ಡದು, ಇಂತಹ ಉತ್ಸವಗಳು ನಮ್ಮ ಸಾಗರದ ಹಿರಿಮೆಯನ್ನು ಹೆಚ್ಚಿಸುತ್ತದೆ ಎಂದರು.
ಬೆಂಗಳೂರು, ಕೇರಳ, ಮಲೇಷ್ಯಾ, ಪಶ್ಚಿಮ ಬಂಗಾಳ ಹೀಗೆ ವಿವಿಧ ಕಡೆಗಳಿಂದ ಆಗಮಿಸಿದ್ದ ಕಲಾವಿದರು ಕಾರ್ಯಕ್ರಮ ನೀಡಿದರು, ಜಾನಪದ ಕಲಾವಿದ ಜೋಗಿಲ ಸಿದ್ದರಾಜು, ಆನಂದ ಮಾದನಗೆರೆ, ನಾಗರಾಜ್ ಅವರ ತಂಡ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಉದ್ಯಮಿ ಟಿ.ವಿ.ಪಾಂಡುರಂಗ ಅವರಿಗೆ ಕಲಾಸಂಘಟಕ ಎಸ್.ಎಸ್.ರಮೇಶ್ ಸ್ಮರಣಾರ್ಥ ಪುರಸ್ಕಾರ, ಡಾ.ಗಣೇಶನ್ ಮತ್ತು ಬಿ.ವಿ.ದತ್ತಾತ್ರೇಯ ಅವರಿಗೆ ಜೀವಮಾನ ಸಾಧನೆಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ. ಮಾಯಾ ರಾಜೇಶ್, ಅಂಗ್ಲುಮಾನ್ ಗುಪ್ತ, ಅರ್ಚನಾ ಪುಣ್ಯೇಶ್ ಹಾಗೂ ನಿಕಿತಾ ಮಂಜುನಾಥ್ ಅವರಿಗೆ ಸಾಧನಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.