ಪರಾರಿಯಾಗಿದ್ದವ ಕರೊನಾ ಸೋಂಕಿತ

DSC_0967
Published on

ಕಲಬುರಗಿ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಜಿಮ್ಸ್ ಆಸ್ಪತ್ರೆಗೆ ದಾಖಲಾಗಲು ಬಂದು ಕರೊನಾ ಸೇರಿ ವಿವಿಧ ಪರೀಕ್ಷೆಗೆ ಒಳಪಟ್ಟ ಬಳಿಕ ಪರಾರಿಯಾಗಿದ್ದ. ಪರೀಕ್ಷಾ ವರದಿ ಕೋವಿಡ್ ಪಾಸಿಟಿವ್ ಬರುತ್ತಲೇ ಜಿಮ್ಸ್ ಸಿಬ್ಬಂದಿ ಆತನ ಶೋಧ ಶುರುವಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟರಲ್ಲಿ ಆತ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಅವಾಂತರ ಮಾಡಿದ್ದಾನೆ.
ಆತ ದಾಖಲಾಗಿದ್ದ ಖಾಸಗಿ ಆಸ್ಪತ್ರೆ ವೈದ್ಯರು, ಪಿಜಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ತಳಮಳ ಶುರುವಾಗಿದೆ. ಜಿಮ್ಸ್ ವೈದ್ಯಕೀಯ ಅಧೀಕ್ಷಕರು ಮತ್ತು ಸಿಬ್ಬಂದಿ ನಿರ್ಲಕ್ಷೃದಿಂದ ಖಾಸಗಿ ಆಸ್ಪತ್ರೆಯವರು ಕ್ವಾರಂಟೈನ್ಗೆ ಹೋಗುವಂತಾಗಿದೆ. ಆತನನ್ನು ಮೊದಲೇ ಹಿಡಿದಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಹೀಗೆ ಇನ್ನೊಂದೆರಡು ಘಟನೆಗಳಾದರೆ ಮುಂದಿನ ದಿನಗಳಲ್ಲಿ ಚಿಕಿತ್ಸೆ ನೀಡಲು ವೈದ್ಯರು ಸಿಗದಂಥ ಸ್ಥಿತಿ ಸೃಷ್ಟಿಯಾದರೂ ಅಚ್ಚರಿ ಇಲ್ಲ.
ಜಿಮ್ಸ್ನಿಂದ ಸೋಂಕಿತ ತಪ್ಪಿಸಿಕೊಂಡ ವಿಷಯವನ್ನು ಮುಚ್ಚಿಟ್ಟಿದ್ದ ಜಿಮ್ಸ್ನವರು, ತಡವಾಗಿ ಜಿಲ್ಲಾಡಳಿತ ಗಮನಕ್ಕೆ ತಂದಿದ್ದಾರೆ. ಈ ಹಂತದಲ್ಲಿ ಜಿಲ್ಲಾಡಳಿತ ಸಹ ಮಾಧ್ಯಮಗಳ ಹಾಗೂ ಇತ್ತೀಚೆಗೆ ನಗರಕ್ಕೆ ಅಗಮಿಸಿದ್ದ ಡಿಸಿಎಂ ಗೋವಿಂದ ಕಾರಜೋಳ ಗಮನಕ್ಕೂ ತರದೆ ಮರೆ ಮಾಚುವ ಕೆಲಸ ಮಾಡಿದಂತಿದೆ.
ವಿಜಯವಾಣಿಗೆ ಲಭ್ಯ ಮಾಹಿತಿಯಂತೆ ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತನೆ ಆಗಿರುವ ಜಿಮ್ಸ್ಗೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ವೈದ್ಯರು ಪರೀಕ್ಷಿಸಿದ್ದಾರೆ. ಅಲ್ಲದೆ ಟ್ರಾವೆಲ್ ಹಿಸ್ಟರಿ ವಿಚಾರಿಸಿದಾಗ ಹೈದರಾಬಾದ್ಗೆ ಹೋಗಿ ಬಂದಿದ್ದಾಗಿ ಹೇಳಿದ್ದಾನೆ. ಆಗ ವೈದ್ಯಕೀಯ ಸಿಬ್ಬಂದಿ ಕರೊನಾ ಶಂಕೆಯಿಂದ ಹೊಟ್ಟೆ ನೋವಿನ ವಿವಿಧ ಪರೀಕ್ಷೆ ಜತೆಗೆ ಕಫ ಮಾದರಿಯನ್ನೂ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಿಕೊಟ್ಟಿದ್ದಾರೆ. ನಂತರ ಆತನಿಗೆ ದಾಖಲಾಗಲು ಸೂಚಿಸಿದ್ದಾರೆ.
ಸಿಬ್ಬಂದಿ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಸಿದಾಗ ಕಾಲ್ಕಿತ್ತಿರುವ ಆತ, ಸ್ವಗ್ರಾಮ ಕೋಡ್ಲಿಗೆ ಹೋಗಿದ್ದಾನೆ. ಅಲ್ಲಿ ಎರಡು ದಿನ ಇದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧ ಪಡೆದಿದ್ದಾನೆ. ಬಳಿಕ ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲಿ ಊರಿನಿಂದ ನೇರವಾಗಿ ಇಲ್ಲಿಗೆ ಬಂದಿದ್ದಾಗಿ ಸುಳ್ಳು ಮಾಹಿತಿ ನೀಡಿದ್ದಾನೆ ಎಂದು ಗೊತ್ತಾಗಿದೆ.
ಪಿಜಿಗಳು, ವೈದ್ಯರು ಹೊಟ್ಟೆ ನೋವಿರುವ ಕಾರಣ ಸಾ್ಕೃನಿಂಗ್ ಮಾಡಿದಾಗ ಕಿಡ್ನಿ ತೊಂದರೆ ಜತೆಗೆ ಕರುಳಿನಲ್ಲಿ ಕೀವು ತುಂಬಿದ್ದು ಪತ್ತೆಯಾಗಿದೆ. ಆಪರೇಷನ್ ಮಾಡಬೇಕಾಗುತ್ತದೆ ಎಂದು ತಿಳಿಸಿ ದಾಖಲಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಗೂ ದಿನಾಂಕ ನಿರ್ಧಾರವಾಗಿತ್ತು. ಆದರೆ ಅಷ್ಟರೊಳಗೆ ಆತನನ್ನು ಕರೊನಾ ತಂಡದವರು ಖಾಸಗಿ ಆಸ್ಪತ್ರೆಯಿಂದ ಮರಳಿ ಜಿಮ್ಸ್ಗೆ ಕರೆದೊಯ್ದು ದಾಖಲಿಸಿದ್ದಾರೆ.

ಪಾಸಿಟಿವ್ ಬರುತ್ತಲೇ ಹೌಹಾರಿದರು
ಜಿಮ್ಸ್ನಿಂದ ಆತ ಪರಾರಿಯಾಗಿದ್ದರೂ ತಲೆಕೆಡಿಸಿಕೊಳ್ಳದ ವೈದ್ಯಕೀಯ ಅಧೀಕ್ಷಕರು ಮತ್ತು ಸಿಬ್ಬಂದಿ, ಯಾವಾಗ ಕರೊನಾ ಪಾಸಿಟಿವ್ ವರದಿ ಬಂತೋ ಹೌಹಾರಿದ್ದಲ್ಲದೆ ಆತ ದಾಖಲಾಗುವ ದಿನ ನೀಡಿದ ವಿಳಾಸ ಆಧರಿಸಿ ಶೋಧ ಆರಂಭಿಸಿದ್ದಾರೆ.
ಇತ್ತ ಜಿಮ್ಸ್ನಲ್ಲಿ ಆತನ ಕಫದ ಮಾದರಿ ಪರೀಕ್ಷಾ ವರದಿ ಕರೊನಾ ಪಾಸಿಟಿವ್ ಬರುತ್ತಲೇ ಹುಡುಕಾಡುತ್ತ ಕೋಡ್ಲಿಗೆ ತೆರಳಿದ್ದಾರೆ. ಅಷ್ಟರಲ್ಲಿ ಆತ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅವಾಂತರ ಮಾಡುವ ಮೂಲಕ ಹತ್ತಾರು ಜನರಿಗೆ ಸೋಂಕು ಹರಡಿಸಿರುವಂತಿದೆ. ಮಾಹಿತಿಯಂತೆ ವೈದ್ಯರ ತಂಡ ಖಾಸಗಿ ಆಸ್ಪತ್ರೆಗೆ ಬಂದು ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಆತನೇ ಎಂಬುದು ಖಚಿತಗೊಳ್ಳುತ್ತಿದ್ದಂತೆ ಜಿಮ್ಸ್ಗೆ ಸ್ಥಳಾಂತರಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ. ಈ ಘಟನೆ ನಡೆಯಲು ಕಾರಣರಾದವರು ಯಾರು?, ಹೊಣೆ ಯಾರು ಎಂಬುದು ಪತ್ತೆಯಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net