

ಬೀದರ್: ಮನುಷ್ಯ ಜನ್ಮ ದೇವರು ಕೊಟ್ಟ ವರ. ಹೀಗಾಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸಬೇಕು ಎಂದು ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಪತಿ ಶ್ರೀ ಡಾ.ಬಸವಲಿಂಗ ಅವಧೂತರು ನುಡಿದರು.
ಅಲ್ಲಮಪ್ರಭು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಳಗಿ ಮೈಸಮ್ಮ ಮಂದಿರ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿ, ಪರಸ್ಪರರ ಭಾವನೆಗಳನ್ನು ಅರ್ಥೈಸಿಕೊಂಡು ಬೇರೆಯವರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು. ಮನೆ ಚಿಕ್ಕದಿದ್ದರೂ ಮನಸ್ಸು ದೊಡ್ಡದಿರಬೇಕು ಎಂದರು.ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ಶರಣರು, ಸಂತರ ವಾಣಿಗಳನ್ನು ಆಲಿಸಬೇಕು. ಉತ್ತಮ ಕೃತಿಗಳನ್ನು ಓದಬೇಕು. ಭಕ್ತಿಯಿಂದ ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆ. ನಿತ್ಯ ಭಕ್ತಿಯಿಂದ ದೇವರ ಪೂಜೆ ಮಾಡಬೇಕು. ಅಧಾತ್ಮದ ಒಲವು ಬೆಳೆಸಿಕೊಳ್ಳಬೇಕು. ಮೂಢನಂಬಿಕೆ, ಮೂಢ ಆಚರಣೆಗಳಿಂದ ದೂರ ಇರಬೇಕು ಎಂದು ಉಪದೇಶಿಸಿದರು.
ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಬಸವರಾಜ ಬಾವಗಿ, ನಾಗಶೆಟ್ಟಿ ಪಾಟೀಲ್, ಬಸವರಾಜ ಶಾಮಣ್ಣ ಬಾವಗಿ, ವೀರಶೆಟ್ಟಿ ಪಾಟೀಲ್, ಬಿ.ಸಿ. ಪಾಟೀಲ್, ರಾಮಲಿಂಗ ಸ್ವಾಮಿ, ಹಣಮಂತ ಪಾಟೀಲ್ ಚಿಟ್ಟಾ ಇತರರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಕೈಲಾಸನಗರದ ಗಣೇಶ ದೇವಸ್ಥಾನದಿಂದ ಮೈಸಮ್ಮ ಮಂದಿರವರೆಗೆ ಅವಧೂತರನ್ನು ಬೆಳ್ಳಿ ರಥದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು. ಕಳಸ ಹೊತ್ತ ಮಹಿಳೆಯರು, ಕೋಲಾಟ, ಡಿಜೆ ಸಂಗೀತ, ಯುವಕರ ನರ್ತನ ಮೆರವಣಿಗೆಗೆ ಕಳೆ ತಂದುಕೊಟ್ಟವು.