ಪರಸ್ಪರ ಎದುರಾದ ಪ್ರೀತಂ, ಭವಾನಿ

ಪರಸ್ಪರ ಎದುರಾದ ಪ್ರೀತಂ, ಭವಾನಿ
Published on

ಹಾಸನ : ದಿನಬೆಳಗಾದರೆ ಮಾಧ್ಯಮಗಳ ಮೂಲಕ ಪರಸ್ಪರ ಮಾತಿನ ಚಕಮಕಿ ನಡೆಸುತ್ತಿರುವ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಮತ್ತು ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಒಂದೇ ಕಾರ್ಯಕ್ರಮದಲ್ಲಿ ಮುಖಾಮುಖಿ ಆದ ಪ್ರಸಂಗ ಬುಧವಾರ ನಗರದಲ್ಲಿ ನಡೆಯಿತು.

ನಗರದ ಖಾಸಗಿ ಆಸ್ಪತ್ರೆಯೊಂದರ ನೂತನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಈ ಇಬ್ಬರೂ ಭಾಗಿಯಾಗಿದ್ದುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಯಿತು.

ಕಾರ್ಯಕ್ರಮದ ಸಂಘಟಕರು ಉದ್ಘಾಟನೆ ಟೇಪ್ ಕತ್ತರಿಸಲು ಶಾಸಕ ಪ್ರೀತಂ ಗೌಡರ ಕೈಗೆ ಕತ್ತರಿ ನೀಡಿದರು. ಆದರೆ ಶಾಸಕ ಪ್ರೀತಂಗೌಡರು ಟೇಪ್ ಕತ್ತರಿಸಲು ಸಮೀಪದಲ್ಲೇ ಇದ್ದ ಭವಾನಿ ಅವರನ್ನು ಆಹ್ವಾನಿಸಿ ಸೌಜನ್ಯ ಮರೆದರು. ಅದಕ್ಕೆ ಅಷ್ಟೇ ಸೌಜನ್ಯದಿಂದ ಭವಾನಿ ಅವರು, ‘ನೀವೇ ಕತ್ತರಿಸಿ’ ಎಂದು ಹಿಂದೆ ನಿಂತರು. ಆದಕ್ಕೆ, ‘ಲೇಡೀಸ್ ಫಸ್ಟ್, ನೀವೇ ಉದ್ಘಾಟನೆ ಮಾಡಿ’ ಎಂದು ಶಾಸಕ ಪ್ರೀತಂಗೌಡರು ಭವಾನಿ ಅವರ ಕೈಗೆ ಕತ್ತರಿ ಇತ್ತರು. ಶಾಸಕರ ಆಹ್ವಾನವನ್ನು ಒಪ್ಪಿ ಭವಾನಿ ಅವರೇ ಟೇಪ್ ಕತ್ತರಿಸಿದರು.

ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ನಡುವೆ ದಿನಬೆಳಗಾದರೆ ಮಾಧ್ಯಮಗಳ ಮೂಲಕ ಪರಸ್ಪರ ಮಾತಿನ ಜಟಾಪಟಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಭವಾನಿ ಅವರು ಹಾಸನದಲ್ಲಿ ಸ್ಪರ್ಧಿಸಿದರೆ ಮೂರನೇ ಸ್ಥಾನಕ್ಕೆ ಹೋಗುತ್ತಾರೆ ಎಂಬುದಾಗಿ ಪ್ರೀತಂಗೌಡ ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಶಾಸಕರು ತಮ್ಮ ಕೆಲಸ ನೋಡಿಕೊಳ್ಳಲಿ, ನಮ್ಮ ಕುಟುಂಬದ ಉಸಾಬರಿ ಅವರಿಗ್ಯಾಕೆ ಎಂಬುದಾಗಿ ಭವಾನಿ ತಿರುಗೇಟು ಸಹ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net