

ಅಫಜಲಪುರ: ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಗಾಗಿ ತಾಲೂಕಿನಲ್ಲಿ 11 ಕೇಂದ್ರಗಳನ್ನು ಆರಂಭಿಸಲಾಗಿದ್ದು, ಪರಸ್ಪರ ಅಂತರ ಕಾಯ್ದುಕೊಂಡು ವಿತರಣೆ ಮಾಡಬೇಕು ಎಂದು ಕೃಷಿ ಇಲಾಖೆ ಉಪ ನಿರ್ದೇಶಕಿ ಅನುಸುಯಾ ಹೂಗಾರ ಸೂಚನೆ ನೀಡಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಖಾಸಗಿ ಆಗ್ರೋ ಕೇಂದ್ರಗಳ ಮಾಲೀಕರು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ 3 ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ 11 ಕೇಂದ್ರಗಳಲ್ಲಿ ಬೀಜ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಕರಜಗಿ, ಅತನೂರನಲ್ಲಿ ತಲಾ 5, ಅಫಜಲಪುರದಲ್ಲಿ 1 ಕೇಂದ್ರ ತೆರೆಯಲಾಗಿದೆ. ಜೂನ್ ಮೊದಲ ವಾರದಲ್ಲಿ ಬಿತ್ತನೆ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ರೈತರಿಂದ ಯಾವುದೇ ದೂರು ಬರದಂತೆ ಬೀಜ ವಿತರಣೆ ಮಾಡಬೇಕು, ಕಡ್ಡಾಯವಾಗಿ ಬೀಜ ಖರೀದಿ ಬಗ್ಗೆ ರಸೀದಿ ನೀಡಬೇಕು ಎಂದು ತಾಕೀತು ಮಾಡಿದರು.
ಖಾಸಗಿ ಆಗ್ರೋ ಕೇಂದ್ರಗಳು ವಿವಿಧ ಗೊಬ್ಬರಗಳ ಮೌಲ್ಯದ ಬಗ್ಗೆ ನಾಮಫಲಕ ಹಾಕಬೇಕು. ಎಲ್ಲ ಗೊಬ್ಬರಗಳ ಗುಣಮಟ್ಟ ಒಂದೇ ಇರುತ್ತದೆ. ಈ ಬಗ್ಗೆ ರೈತರಿಗೆ ತಿಳಿಹೇಳಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ದಿನಕ್ಕೆ ಎಷ್ಟು ರೈತರಿಗೆ ಬೀಜ ಸಿಗುತ್ತದೆ ಎಂಬುದನ್ನು ಡಂಗೂರ ಸಾರಿ ಹೇಳಿ ಬೀಜ ವಿತರಣೆ ಮಾಡಿ. ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಹೇಳಿದರು.
ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ಸಿಪಿಐ ಮಹಾದೇವ ಪಂಚಮುಖಿ, ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಖಾಸೀಂ, ಕೃಷಿ ಅಧಿಕಾರಿಗಳಾದ ಅರವಿಂದ ರಾಠೋಡ್, ಆನಂದ ಅವರಾದ, ಕವಿತಾ ಯರಗಲ್, ದಿವ್ಯಾ ಕರಜಗಿ, ಸರ್ದಾರ ಭಾಷಾ ನದಾಫ್ ಇದ್ದರು.