ಪರಶುರಾಮಪುರ ತಾಲೂಕು ಹೋರಾಟಕ್ಕೆ ಕೈಜೋಡಿಸಿ

PRPURA HOORATA 4
Published on

ಪರಶುರಾಮಪುರ: ಆ.17ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ನೇತೃತ್ವದಲ್ಲಿ ಪರಶುರಾಮಪುರ ತಾಲೂಕು ಘೋಷಣೆಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಗ್ರಾಮಸ್ಥರು ಕೈಜೋಡಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಚಿಕ್ಕಣ್ಣ ಮನವಿ ಮಾಡಿದರು.
ಈ ಸಂಬಂಧ ಗ್ರಾಮದ ಮುಖ್ಯ ವೃತ್ತದಲ್ಲಿ ಸರ್ಕಾರದ ಗಮನ ಸೆಳೆಯುವ ಹಿನ್ನೆಲೆ ಈಚೆಗೆ ಆಯೋಜಿಸಿದ್ದ ಜಾಥಾದಲ್ಲಿ ರೈತ ಸಂಘದ ಪದಾಧಿಕಾರಿಗಳು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು.
ಕಳೆದ ಹತ್ತಾರು ದಶಕಗಳಿಂದ ಸರ್ಕಾರ ಪರಶುರಾಮಪುರ ಹೋಬಳಿ ಕೇಂದ್ರವನ್ನು ತಾಲೂಕನ್ನಾಗಿ ಘೋಷಿಸಬೇಕು ಎಂದು ಹಲವು ರೀತಿಯಲ್ಲಿ ಹೋರಾಟ ಕೈಗೊಂಡರೂ ಆಳುವ ಸರ್ಕಾರಗಳು ಕಿವಿಗೆ ಹಾಕಿಕೊಳ್ಳದೆ ಮಲತಾಯಿ ಧೋರಣೆ ತಾಳಿವೆ. ಈ ಹಿನ್ನೆಲೆ ಅಂದು ಚಳ್ಳಕೆರೆ ತಾಲೂಕು ಕೇಂದ್ರದ ಚಳ್ಳಕೇರಮ್ಮ ದೇವಸ್ಥಾನದಿಂದ ಹೊರಟು ಮುಖ್ಯವೃತ್ತದ ಮೂಲಕ ತಾಲೂಕು ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು. ಈ ಹಿನ್ನೆಲೆ ಪರಶುರಾಮಪುರ ಹೋಬಳಿಯ 52 ಹಳ್ಳಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಸಂಘದವರೊಂದಿಗೆ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಜೆ.ಗುಂಟೆ ಹನುಮಂತರಾಯ, ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ, ತಾಲೂಕು ಉಪಾಧ್ಯಕ್ಷ ಜಂಪಣ್ಣ, ಗ್ರಾಮಘಟಕದ ಅಧ್ಯಕ್ಷ ನವೀನಗೌಡ, ಪ್ರಸನ್ನಕುಮಾರ, ಮಂಜುನಾಥ, ರಾಮಚಂದ್ರಪ್ಪ, ಭಾಷಾ, ವೃಷಭೇಂದ್ರಪ್ಪ, ರತ್ನಪ್ಪ, ರಾಜಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net