

ಗೋಕರ್ಣ: ವಿಶ್ವದ ಏಕಮೇವ ಪರಶಿವ ಆತ್ಮಲಿಂಗ ತಾಣ ಗೋಕರ್ಣದಲ್ಲಿ ಮಹಾಶಿವರಾತ್ರಿಯ ಶಿವಯೋಗದಂದು ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾಗಲು ಭಕ್ತರ ದಂಡು ಸಂಭ್ರಮದಿಂದ ಆಗಮಿಸುತ್ತಿದೆ.
ಆತ್ಮಲಿಂಗದಿಂದಾಗಿ ಭೂಕೈಲಾಸ ಎಂಬ ಗೌರವ ಗೋಕರ್ಣಕ್ಕಿದೆ. ಜೊತೆಗೆ ಇದು ದಕ್ಷಿಣ ದೇಶದ ಕಾಶಿ ಎಂಬ ಪ್ರತೀತಿ ಪಡೆದಿದೆ.
ಇವೆಲ್ಲದರ ಸಂಗಡ ಮಾಘ ಬಹುಳ ತ್ರಯೋದಶಿಯಂದು ಪರಶಿವ ಪ್ರಥಮ ಬಾರಿಗೆ ಲಿಂಗರೂಪದಲ್ಲಿ ಪ್ರಕಟವಾದ ಪುಣ್ಯ ದಿನ. ಈ ದಿನದಂದು ಭೂಕೈಲಾಸ ಮತ್ತು ದಕ್ಷಿಣದ ಕಾಶಿ ಗೋಕರ್ಣದಲ್ಲಿ ಶಿವನ ಪೂಜೆ ಕೈಗೊಂಡರೆ ಅತುಳ ಪುಣ್ಯ ಎಂದು ಪುರಾಣಗಳು ಸಾರಿವೆ. ಇಂತಹ ಪೌರಾಣಿಕ ಭೂಮಿಯಲ್ಲಿರುವ ಆತ್ಮಲಿಂಗವನ್ನು ಮುಟ್ಟಿ ಪೂಜೆ ಮಾಡುವ ಅವಕಾಶ ಗೋಕರ್ಣದಲ್ಲಿ ಮಾತ್ರ ಲಭ್ಯವಿದೆ. ಇದರಿಂದಾಗಿ ನೂರಾರು ವರ್ಷಗಳಿಂದ ಕರ್ನಾಟಕ ಸೇರಿ ಮಹಾರಾಷ್ಟ್ರ, ಗೋವಾ, ಆಂಧ್ರ ಮುಂತಾದ ರಾಜ್ಯಗಳಿಂದ ಶಿವಯೋಗದಂದು ಗೋಕರ್ಣ ಆತ್ಮಲಿಂಗಕ್ಕೆ ತಪ್ಪದೆ ಪೂಜೆ ಮಾಡುವ ಕೌಟುಂಬಿಕ ಪರಂಪರೆ ಬೆಳೆದು ಬಂದಿದೆ. ಗುರುವಾರದಿಂದಲೇ ಮಹಾರಾಷ್ಟ್ರ ರಾಜ್ಯದ ಶಿವ ಭಕ್ತರ ಆಗಮನ ಇಲ್ಲಿ ಕಂಡು ಬರುತ್ತಿದೆ.
ಅಖಂಡ ಜಾಗರಣೆ: ಶುಕ್ರವಾರ ಶಿವಯೋಗವಿದ್ದು ಅಂದು ನಡೆಯುವ ಅಖಂಡ ಜಾಗರಣೆ ಇಲ್ಲಿ ಮಹತ್ವ ಪಡೆದಿದೆ. ಜಾಗರಣೆಗೆ ಅನುಕೂಲವಾಗುವ ಬಗೆಯಲ್ಲಿ ಮಹಾಬಲೇಶ್ವರ ಮಂದಿರದಲ್ಲಿ ತಲತಲಾಂತರದಿಂದ ವಿವಿಧ ಉತ್ಸವಗಳನ್ನು ಸಂಘಟಿಸುತ್ತ ಬರಲಾಗಿದೆ. ಹಿಂದಿನ ದಿನ ರಾತ್ರಿಯಿಂದಲೇ ಮಹಾಬಲೇಶ್ವರ ಮಂದಿರ ತೆರೆದಿಡಲಾಗುತ್ತದೆ. ಶಿವಯೋಗದ ದಿನ ಅಹೋರಾತ್ರಿ ಆತ್ಮಲಿಂಗ ಸನ್ನಿಧಿಯಲ್ಲಿ ಪೂಜೆ, ಅಭಿಷೇಕ, ರುದ್ರಘೊಷ ಮತ್ತು ಶಿವ ಭಜನೆ ಮಾರ್ದನಿಸುತ್ತದೆ. ಸಂಜೆ ಮಹಾಬಲೇಶ್ವರ ಉತ್ಸವ ಪುರ ಪರ್ಯಟನ ನಡೆಸುತ್ತದೆ. ರಾತ್ರಿಯ ಮಹಾಪೂಜೆ ನಂತರ ಪುನಃ ಉತ್ಸವವು ಕೋಟಿತೀರ್ಥಕ್ಕೆ ತೆರಳಿ ಅಲ್ಲಿ ನಡೆಯುವ ಜಲಯಾನೋತ್ಸವ (ತೆಪ್ಪೋತ್ಸವ) ಭಾಗಿಯಾಗುತ್ತದೆ. ಮಾರನೆಯ ದಿನದ ಬೆಳಗಿನ ಜಾವದ ಸಮಯಕ್ಕೆ ಉತ್ಸವ ರಥಬೀದಿಗೆ ಬರುತ್ತದೆ. ಅಲ್ಲಿ ಮಹಾಬಲೇಶ್ವರ ಪುಷ್ಪ ರಥೋತ್ಸವ ನಡೆಯುತ್ತದೆ. ಈ ಎಲ್ಲ ಉತ್ಸವಗಳ ಜೊತೆಗೆ ಭಕ್ತರು ಕೂಡಾ ಸಾಲು ಸಾಲಾಗಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಶುಕ್ರವಾರದ ಈ ಎಲ್ಲ ಕಾರ್ಯಕ್ರಮಗಳಿಗಾಗಿ ಮಹಾಬಲೇಶ್ವರ ಮಂದಿರ ಸಜ್ಜುಗೊಂಡಿದೆ.
ಅಹೋರಾತ್ರಿ ಭಜನೆ, ಉತ್ಸವ, ಕೀರ್ತನೆಗಳ ಸಂಭ್ರಮ: ಭಟ್ಕಳ: ತಾಲೂಕಿನಾದ್ಯಂತ ಶಿವರಾತ್ರಿಯ ಸಂಭ್ರಮ, ಜಾಗರಣೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಹಲವು ಶಿವ ದೇವಸ್ಥಾನಗಳಲ್ಲಿ ಅಹೋರಾತ್ರಿ ಭಜನೆ, ಉತ್ಸವ, ಕೀರ್ತನೆಗಳು ನಡೆಯಲಿದೆ. ತಾಲೂಕಿನ ಪ್ರಮುಖ ಶಿವಾಲಯಗಳಲ್ಲಿ ಭಕ್ತರ ದಂಡೆ ಹರಿದು ಬರಲಿದೆ. ಶ್ರೀ ಲಕ್ಷ್ಮೀ ನಾರಾಯಣ ರಾಮನಾಥ ಶಾಂತೇರಿ ಕಾಮಾಕ್ಷೀ ದೇವಸ್ಥಾನದಲ್ಲಿ ಫೆ. 21 ರಿಂದ ಫೆ 23 ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿದೆ. ಶಿವರಾತ್ರಿಯ ದಿನ ವಿಶೇಷವಾಗಿ ಶ್ರೀ ಮಹಾರುದ್ರ ಹವನ, ಮೈದರ್ಶನ, ತೀರ್ಥ ಪ್ರಸಾದ ವಿತರಣೆ ನಡೆದು ಮಹಾಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 7ಗಂಟೆಗೆ ಶ್ರೀ ದೇವಸ್ಥಾನದಿಂದ ಪ್ರಾರಂಭಿಸಿ ಭಟ್ಕಳ ಪೇಟೆಯಲ್ಲಿ ಶ್ರೀ ದೇವರಿಗೆ ಬೆಳ್ಳಿಯ ಪಲ್ಲಕ್ಕಿ ಉತ್ಸವ, ಅಷ್ಠಾವಧಾನ ಸೇವೆ, ರಾತ್ರಿ ಹೂವಿನ ಪೂಜೆ ನಡೆಯಲಿದೆ. ಮುರ್ಡೆಶ್ವರದಲ್ಲೂ ಶ್ರೀ ಮಾತೋಬಾರ ದೇವರಿಗೆ ವಿಷೇಶ ಪೂಜೆ ನಡೆಯಲಿದೆ 21ರಿಂದ ವಿವಿಧ ಧಾರ್ವಿುಕ ಅನುಷ್ಠಾನಗಳು ಪ್ರಾರಂಭವಾಗಿ ಫೆ. 22ರವರೆಗೆ ನಡೆಯಲಿದೆ.
ಬೆಳಗ್ಗೆ 5.30ಕ್ಕೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಬೆಳಗ್ಗೆ ಆಗಮಿಸುವ ಪಾದಯಾತ್ರಿಗಳಿಗೆ ಹಾಗೂ ಮಧ್ಯಾಹ್ನ ಆಗಮಿಸುವ ಭಕ್ತರಿಗೆ ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ. 21ರಂದು ರಾತ್ರಿ ರಥೋತ್ಸವ ನಡೆಯಲಿದೆ. ತಾಲೂಕಿನ ಕುಟುಮೇಶ್ವರ ದೇವಸ್ಥಾನದಲ್ಲೂ ಪೂಜೆ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಶಿವ ಪಂಚಾಕ್ಷರಿ ಜಪ, ಸಹಸ್ರ ಬಿಲ್ವಾರ್ಚನೆ, ಶತ ರುದ್ರಾಭಿಷೇಕ ನಡೆದು ರಾತ್ರಿ 10ರಿಂದ ಬೆಳಿಗ್ಗೆ 7ರತನಕ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ.