

ಹಾಸನ : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಸಮಯದಲ್ಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಶಾಂತಿಯುತವಾಗಿ ಚುನಾವಣೆ ನಡೆಸಬೇಕಿದೆ. ಹಾಸನ ಜಿಲ್ಲೆಯ ಚುನಾವಣೆ ನಡೆಯುವ ಪ್ರದೇಶಗಳ ವ್ಯಾಪ್ತಿಯಲ್ಲಿ ಯಾವುದೇ ಶಸ್ತ್ರ, ಬಂದೂಕುಗಳನ್ನು ಹೊಂದುವುದು ಮತ್ತು ಚುನಾವಣೆ ಘೋಷಿತ ಪ್ರದೇಶದಲ್ಲಿ ಶಸ್ತ್ರಗಳನ್ನು ಹೊತ್ತು ತಿರುಗುವುದರಿಂದ ಅಶಾಂತಿಗೆ ಕಾರಣವಾಗಬಹುದು. ಈ ಕಾರಣಗಳಿಂದ ಜಿಲ್ಲೆಯಲ್ಲಿನ ಆಯುಧ ಪರವಾನಗಿದಾರರು ತಮ್ಮ ಆಯುಧಗಳನ್ನು ಆಯಾ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತ ಆಯುಧ ಮತ್ತು ಮದ್ದು ಗುಂಡುಗಳ ವಹಿವಾಟುದಾರರಲ್ಲಿ ಚುನಾವಣೆ ಪ್ರಕ್ರಿಯೆಗಳು ಮುಗಿಯುವವರೆಗೂ ಠೇವಣಿ ಇಡುವುದು ಅವಶ್ಯಕವೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಆದೇಶ ಹೊರಡಿಸಿದ್ದಾರೆ.
ಬ್ಯಾಂಕುಗಳು, ಸರ್ಕಾರಿ, ಅರೆ ಸರ್ಕಾರಿ, ಸಂಸ್ಥೆಗಳಲ್ಲಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧಗಳನ್ನು ಹೊಂದಿರುವವರು ಹಾಗೂ ವೈಯಕ್ತಿಕವಾಗಿ ಜೀವ ಬೆದರಿಕೆ ಹೊಂದಿರುವವರು ಆಯಧಗಳನ್ನು ಅತ್ಯಗತ್ಯವಾಗಿ ತಮ್ಮಲ್ಲಿಯೆ ಇಟ್ಟುಕೊಳ್ಳಲು ಅನಿವಾರ್ಯತೆ ಇದ್ದಲ್ಲಿ ಸಕಾರಣಗಳೊಂದಿಗೆ ತಮ್ಮ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಬೇಕು. ಸದರಿ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಗಳ ಆಧಾರದನ್ವಯ ಪೊಲೀಸ್ ಠಾಣೆಯ ಮುಖ್ಯಸ್ಥರ ಜವಾಬ್ದಾರಿ ಮೇಲೆ ಆಯುಧಗಳನ್ನು ಠೇವಣಿ ಇಡುವುದರಿಂದ ವಿನಾಯಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.