

ಕಮಲನಗರ: ಪ್ರೀತಿ, ವಿಶ್ವಾಸ, ಸಹಕಾರ ಮತ್ತು ಸಹಬಾಳ್ವೆಯಲ್ಲಿ ಪರಮಾತ್ಮನ ನೆಲೆಯಿದ್ದು, ಭಕ್ತಿ ಮತ್ತು ಧಾನ್ಯದಿಂದ ಪೂಜಿಸಿದಲ್ಲಿ ಸಕಲ ಕಷ್ಟಗಳು ಇನ್ನಿಲ್ಲದಂತಾಗುತ್ತವೆ ಎಂದು ಪಂಢರಪುರದ ಏಕನಾಥ ಮಹಾರಾಜ ಹಂಡೆ ನುಡಿದರು.
ತಾಲೂಕಿನ ಬಾಲೂರ್(ಕೆ) ಗ್ರಾಮದಲ್ಲಿ ಬುಧವಾರ ಸಂತ ಸಂಗಪ್ಪ ಮಹಾರಾಜರ ೭೨ನೇ ಪುಣ್ಯ ಸ್ಮರಣೋತ್ಸವ ಮತ್ತು ಅಖಂಡ ಹರಿನಾಮ ಸಪ್ತಾಹದ ನಿಮಿತ್ತ ಹಮ್ಮಿಕೊಂಡಿದ್ದ ಕಾಲಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ಮ ಬದುಕಿನ ಇಷ್ಟಾರ್ಥಗಳನ್ನು ಈಡೇರಿಸುವ ಭ್ರಮೆಯಲ್ಲಿ ಹಣ ಸಂಪಾದನೆ ಹುಚ್ಚು ದುಃಖಕ್ಕೆ ಮೂಲ ಕಾರಣವಾಗಿದೆ. ಸಂಸಾರದ ಸುಖ ಬಯಸುವ ಪ್ರತಿಯೊಬ್ಬರೂ ಪರಮಾತ್ಮನನ್ನು ಭಕ್ತಿಯಿಂದ ಧ್ಯಾನಿಸಿ ನೆಮ್ಮದಿ ಬದುಕು ಕಾಣಬೇಕು. ಸಂತರ ವಾಣಿಗಳ ಆಲಿಸುವಿಕೆ ಮತ್ತು ಧ್ಯಾನದಿಂದ ಪರಮಾತ್ಮನ ದರುಶನ ಪ್ರಾಪ್ತಿಯಾಗುತ್ತದೆ. ಅಜ್ಞಾನಿಗೆ ಜ್ಞಾನ ಮಾರ್ಗ ತೋರಿಸಿ ನಿಶ್ಚಲವಾದ ಮನಸ್ಸನ್ನು ನೀಡಿ ಮುಕ್ತಿಗೆ ದಾರಿ ತೋರಿಸುವ ಗುರುವಿನ ಅಂತಕರಣ ಅತ್ಯಂತ ಪವಿತ್ರವಾಗಿದೆ. ತಂದೆ ತಾಯಿ ಮತ್ತು ಗುರು ಹಿರಿಯರನ್ನು ಗೌರವಿಸಬೇಕು ಎಂದರು.
ಸಮಿತಿ ಅಧ್ಯಕ್ಷ ರಾಜಕುಮಾರ ಚಾಂಡೇಶ್ವರೆ, ಜ್ಞಾನೋಬಾ ಮಹಾರಾಜ ಹಂಡೆ, ಸಂತೋಷ ಮಹಾರಾಜ, ಶಿವಕುಮಾರ ಸಿರಸಗೆ, ದಿಗಂಬರ ಢಗೆ, ತಾನಾಜಿ ಹೋಳಕರ, ಸಂದೀಪ ಪಾಟೀಲ್, ರಾಮ ಬಳತೆ, ಶಿವರಾಜ ಬಿರಾದಾರ, ವಿಠ್ಠಲ ಪಾಟೀಲ್, ಯುವರಾಜ ಬಿರಾದಾರ, ನೇತಾಜಿ ಪಾಟೀಲ್, ಬಾಲಾಜಿ ಪಾಟೀಲ್, ಜ್ಞಾನೇಶ್ವರ ಚಾಂಡೇಶ್ವರ ಹಾಗೂ ಇನ್ನಿತರರು ಇದ್ದರು.
ಪಲ್ಲಕ್ಕಿ ಉತ್ಸವ : ಸಂತ ಸಂಗಪ್ಪ ಮಹಾರಾಜರ ಪಲ್ಲಕ್ಕಿ ಉತ್ಸವಕ್ಕೆ ಪಂಢರಪೂರದ ಏಕನಾಥ ಮಹಾರಾಜ ಹಂಡೆ ಚಾಲನೆ ನೀಡಿದರು. ಪಲ್ಲಕ್ಕಿ ಉತ್ಸವ ಮೆರವಣಿಗೆಯೂ ಮಂದಿರದಿಂದ ಆರಂಭಗೊಂಡು ಗ್ರಾಮದ ವಿವಿಧ ಬಡಾವಣೆಗಳ ಮೂಲಕ ತೆರಳಿತು. ನಂತರ ಪಲ್ಲಕ್ಕಿ ಮೆರವಣಿಗೆಯು ಮಂದಿರಕ್ಕೆ ಬಂದು ತಲುಪಿತು. ಸಂತ ಸಂಗಪ್ಪ ಮಹಾರಾಜರ ಪಲ್ಲಕ್ಕಿ ಅದ್ಧೂರಿ ಭಕ್ತ ಸಮೂಹದ ಮಧ್ಯೆ ಮೆರವಣಿಗೆ ನಡೆಯಿತು.