ಪರಭಾಷಾ ವ್ಯಾಮೋಹದಿಂದ ಕನ್ನಡಕ್ಕೆ ಹಿನ್ನಡೆ

18CBP3
Published on

ಚಿಕ್ಕಬಳ್ಳಾಪುರ : ನಿರಂತರವಾಗಿ ನಾಡು ನುಡಿ ಉಳಿಸಿ ಬೆಳೆಸುವ ಮಹತ್ಕಾರ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಕರೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಅಷ್ಟಲಕ್ಷ್ಮೀ ಸೇವಾ ಸಮಿತಿ ಟ್ರಸ್ಟ್ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ರಾಜ್ಯೋತ್ಸವ ನವೆಂಬರ್‌ಗೆ ಮಾತ್ರ ಸೀಮಿತವಾಗಬಾರದು. ಇದು ನಿತ್ಯೋತ್ಸವವಾಗಬೇಕು. ಭಾಷೆ, ನೆಲ ಜಲದ ಗರಿಮೆ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ಮೊದಲು ಪ್ರತಿ ಮನೆಯಲ್ಲೂ ಮಕ್ಕಳಿಗೆ ಕನ್ನಡ ಕಲಿಸಬೇಕು. ಚಿಕ್ಕ ವಯಸ್ಸಿನಿಂದಲೇ ಭಾಷಾ ಪ್ರೇಮ ಬೆಳೆಸಬೇಕು. ಆದರೆ, ಬಹುತೇಕ ದೊಡ್ಡವರಲ್ಲಿಯೇ ಪರಭಾಷಾ ವ್ಯಾಮೋಹ ಇದೆ. ಇದರ ದುಷ್ಪರಿಣಾಮದಿಂದ ಕನ್ನಡ ಭಾಷೆ ಹಿನ್ನಡೆ ಅನುಭವಿಸುವಂತಾಗಿದೆ ಎಂದು ವಿಷಾಧಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರುತ್ತಿರುವ ಮಹಿಳೆಯರು ಮನಸ್ಸು ಮಾಡಿದಾಗ ಕನ್ನಡೀಕರಣ ಸುಲಭ. ಇದರ ನಡುವೆ ಅಷ್ಟಲಕ್ಷ್ಮೀ ಸೇವಾ ಸಮಿತಿ ಮಹಿಳಾ ತಂಡವು ವಿವಿಧ ಸೇವಾ ಚಟುವಟಿಕೆಯ ಜತೆಗೆ ಕನ್ನಡ ಜಾಗೃತಿ ಕಾರ್ಯಕ್ರಮ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಜಿಲ್ಲೆಯು ಆಂಧ್ರ ಗಡಿ ಭಾಗದಲ್ಲಿರುವುದರಿಂದ ತೆಲುಗು ಭಾಷೆಯ ಬಳಕೆ ವಾಡಿಕೆಯಾಗಿದೆ. ಆದರೂ ಈ ಭಾಗದ ಜನರು ಕನ್ನಡಾಭಿಮಾನ ತೋರಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳ ಮೂಲಕ ನಾಡಭಾಷೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ ಎಂದರು.

ಅಷ್ಟಲಕ್ಷ್ಮೀ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ಪಿ.ಎ.ಗೀತಾ, ಖಜಾಂಚಿ ಬಿ.ವಿ.ರೂಪಾ, ಸದಸ್ಯರಾದ ಮುಮ್ತಾಜ್, ಲಕ್ಷ್ಮೀ, ನಿಸರ್ಗ, ಕಸಾಪ ತಾಲೂಕು ಅಧ್ಯಕ್ಷೆ ಉಷಾ ಶ್ರೀನಿವಾಸ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net