ಪ್ರಭು ಪರಂಜ್ಯೋತಿಗೆ ಭವ್ಯ ಸ್ವಾಗತ

TDL 14-1B
ತೇರದಾಳದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಪ್ರಭು ಪರಂ ಜ್ಯೋತಿ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ವಿವಿಧ ವಾದ್ಯಗಳೊಂದಿಗೆ ಸಾವಿರಾರು ಭಕ್ತರು ಭಾಗಿಯಾಗಿದ್ದರು.
Published on

ತೇರದಾಳ: ಹನ್ನೇರಡನೆ ಶತಮಾನದ ಶೂನ್ಯಸಿಂಹನಾಧೀಶ್ವರ ಅಲ್ಲಮಪ್ರಭು ದೇವರ ಪ್ರಭು ಪರಂಜ್ಯೋತಿ ಬಳ್ಳಿಗಾವಿಯಿಂದ ಚಿಮ್ಮಡಕ್ಕೆ ಆಗಮಿಸಿದ್ದು, ಸೋಮವಾರ ಅದ್ದೂರಿ ಭವ್ಯ ಮೆರವಣಿಗೆಯಲ್ಲಿ ತೇರದಾಳಕ್ಕೆ ಕರೆತರಲಾಯಿತು.

ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ನೂತನ ಕಟ್ಟಡ ಲೋಕಾರ್ಪಣೆ ಹಿನ್ನೆಲೆ ನ.14ರಿಂದ ಅ.11ರ ವರೆಗೆ ತಿಂಗಳ ಪರ್ಯಂತರ ನಡೆಯಲಿರುವ ಅದ್ದೂರಿ ಉತ್ಸವಕ್ಕೆ ಪ್ರಭು ಜ್ಯೋತಿ ಮೂಲಕ ಚಾಲನೆ ನೀಡಲಾಯಿತು.
ಚಿಮ್ಮಡದಿಂದ ಹೋರಟ ಪ್ರಭುಜ್ಯೋತಿಯ ಪಾದಾಯಾತ್ರೆಯು ರಬಕವಿ, ಹನಗಂಡಿ ಮಾರ್ಗವಾಗಿ ಸಂಭ್ರಮದೊಂದಿಗೆ ತೇರದಾಳ ಪ್ರವೇಶಿಸಿತು. ಶೇಗುಣಸಿಯ ಮಹಾಂತದೇವರು, ಚಿಮ್ಮಡದ ಪ್ರಭು ಸ್ವಾಮೀಜಿ, ತೇರದಾಳದ ಗಂಗಾಧರದೇವರು ಸಾನ್ನಿಧ್ಯ ವಹಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ದಾರಿಯುದ್ದಕ್ಕೂ ವಿವಿಧ ಗ್ರಾಮಗಳ ಗ್ರಾಮಸ್ಥರು ಸಂಭ್ರಮದಿಂದ ಮೆರವಣಿಗೆಗೆ ಸ್ವಾಗತ ಕೋರಿದರು. ಕರಡಿ ಮಜಲು, ನಗಾರಿ, ಕೈಪೆಟ್ಟು, ಜಾಂಜ್, ಸಾಂಬಾಳ ಸೇರಿ ವಿವಿಧ ವಾದ್ಯಮೇಳಗಳು ಮೇಳೈಸಿದವು. ಆರುತಿ, ಕುಂಭಮೇಳದೊಂದಿಗೆ ಪ್ರಭುವಿನ ಪಲ್ಲಕ್ಕಿ ಉತ್ಸವ, ಪರಂ ನಿರಂಜನ ಪ್ರಭು ಜ್ಯೋತಿಯ ಭವ್ಯ ಅಲಂಕಾರಿಕ ವಾಹನ, 50ಕ್ಕೂ ಅಧಿಕ ಚಕ್ಕಡಿಗಳಲ್ಲಿ ಅನುಭವ ಮಂಟಪದ ಭಾವಚಿತ್ರಗಳ ಭವ್ಯ ಮೆರವಣಿಗೆಗಳು ಶರಣ ಕಾಲದ ಉತ್ಸವವನ್ನು ಮರುಕಳಿಸುವಂತೆ ಮಾಡಿತು. ಪ್ರಭುಜ್ಯೋತಿ ಮೆರವಣಿಗೆ ಹಾಗೂ ಶ್ರೀಗಳಿಗೆ ಮನೆಮನೆಗಳ ಮುಂದೆ ಪಾದಪೂಜೆ, ಆರುತಿ ಮಾಡಿ, ಹೂಮಳೆಗರೆದು ಜ್ಯೋತಿಯನ್ನು ಸ್ವಾಗತಿಸಿಕೊಂಡರು.

ಪಾದಯಾತ್ರಾರ್ಥಿಗಳಿಗೆ ಪಾನಕ, ಪ್ರಸಾದ ಸೇರಿ ವಿವಿಧ ವ್ಯವಸ್ಥೆ ಮಾಡಲಾಗಿತ್ತು. ತೇರದಾಳ, ರಬಕವಿ-ಬನಹಟ್ಟಿ ಅವಳಿ ತಾಲೂಕಿನ ನಗರ-ಗ್ರಾಮಗಳು, ರಾಜ್ಯ ಮತ್ತು ಮಹಾರಾಷ್ಟ್ರದಿಂದಲೂ ಬಂದ ಸದ್ಬಕ್ತರು, ಮಹಿಳೆಯರು, ಚಿಕ್ಕಮಕ್ಕಳು ಸೇರಿ ಹತ್ತು ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿದ್ದರು. ಹಿರಿಯರಾದ ಮಲ್ಲಪ್ಪ ಸಲಬನ್ನವರ ಚಿಮ್ಮಡದಿಂದ ತೇರದಾಳಕ್ಕೆ ದೀರ್ಘದಂಡ ನಮಸ್ಕಾರ ಹಾಕಿದರೆ, ಮರಗಾಲು ಕಟ್ಟಿಕೊಂಡ ವ್ಯಕ್ತಿ ಸೇರಿ ಚಿಕ್ಕಮಕ್ಕಳು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.

ಇಂತಹ ಅಭೂತಪೂರ್ವ ಕಾರ್ಯಕ್ರಮವು ಶರಣ ಸಂಸ್ಕೃತಿ ಮತ್ತು ಶರಣರ ಕಾಲದ ಉತ್ಸವ ನೆನಪಿಸಿಕೊಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net