ಪರಂಪರೆಯನ್ನು ನೆನಪಿಸಿದ ‘ಯೋಗ’

21rajesh1
Published on

ಚಾಮರಾಜನಗರ: ಭಾರತದ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಬೆರೆತು ಹೋಗಿರುವ ಯೋಗ ಕಿರಿಯರಿಂದ ಹಿಡಿದು ಹಿರಿಯವರೆಗೂ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿಯಾಗಿದ್ದು, ಅಂತಾರಾಷ್ಟ್ರೀಯ ಯೋಗ ದಿನ ಅಂತಹ ಶ್ರೀಮಂತ ಪರಂಪರೆಯನ್ನು ನೆನಪಿಸಿತು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಜಿಲ್ಲಾದ್ಯಂತ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಮುಂಜಾನೆ ಯೋಗಾಭ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಚಾಮರಾಜನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಗುಂಡ್ಲುಪೇಟೆ ಪಟ್ಟಣದ ಮದ್ದಾನೇಶ್ವರ ಮಹಾಮನೆಯಲ್ಲಿ ಮಹಾಮನೆ ಯೋಗಕೇಂದ್ರ, ಕೊಳ್ಳೇಗಾಲದ ಎಂ.ಜಿ.ಎಸ್.ವಿ ಕಾಲೇಜು ಮೈದಾನದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಯಳಂದೂರು ಯರಿಯೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹನೂರು ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿರುವ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲೆ-ಕಾಲೇಜು ವಿದ್ಯಾರ್ಥಿಗಳು, ಪುರುಷರು, ಮಹಿಳೆಯರು ಭಾಗವಹಿಸಿ ಯೋಗಾಸನ ಮಾಡಿದರು. ಇವರಿಗೆ ಯೋಗ ಶಿಕ್ಷಕರು ಯೋಗದ ಮಹತ್ವ ತಿಳಿಸಿಕೊಟ್ಟರು.

ಸೇವಾ ಭಾರತಿಯಲ್ಲಿ ಯೋಗಾಭ್ಯಾಸ:

ಚಾಮರಾಜನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಶನಿವಾರ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಂದಿಗೆ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಸಂಚಾಲಕ ನಿಜಗುಣ ಮಾತನಾಡಿ, ಯೋಗ, ಆಯುರ್ವೇದ ಭಾರತ ದೇಶದ ಇತಿಹಾಸದಲ್ಲಿ ನಮ್ಮ ಸಂಸ್ಕೃತಿ ಪರಂಪರೆಗಳಲ್ಲಿ ಬೆರೆತು, ಸಾವಿರಾರು ವರ್ಷಗಳಿಂದ ಜನರ ದೈಹಿಕ, ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿಯಾಗಿದೆ. ವರ್ಷದ 365 ದಿನಗಳಲ್ಲಿ ದೊಡ್ಡ ಹಗಲು ಇರುವ ಈ ದಿನವನ್ನು ವಿಶ್ವ ಯೋಗ ದಿನವಾಗಿ ಆಚರಿಸಲಾಗುತ್ತಿದೆ. ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿ ಅವರು ವಿಶ್ವದ ಎಲ್ಲ ದೇಶಗಳ ಸಹಮತದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಕಾರಣರಾಗಿದ್ದಾರೆ. ಇಡೀ ಜಗತ್ತೇ ಇದಕ್ಕೆ ಮನ್ನಣೆ ನೀಡಿವೆ ಎಂದರು.

ಬಳಿಕ 150ಕ್ಕೂ ಹೆಚ್ಚು ಯೋಗ ಬಂಧುಗಳು ಮತ್ತು 1000ಕ್ಕೂ ಶಾಲಾ ಮಕ್ಕಳು ಸಾಮೂಹಿಕ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಮಾಡಿದರು. ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಶಾಲೆಯ ಕಾರ್ಯದಶಿ ವಾಸುದೇವ ಗುರೂಜಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಕುಮಾರಸ್ವಾಮಿ, ಯೋಗ ಶಿಕ್ಷಕ ಶ್ರೀಕಾಂತ್, ರಾಜೇಶ್, ಸುರೇಶ್, ಮಂಗಳಗೌರಿ, ದೈಹಿಕ ಶಿಕ್ಷಣ ಶಿಕ್ಷಕ ಬಸವಣ್ಣ, ಬಾಲು, ರವಿ, ರಮೇಶ್ ಹಾಜರಿದ್ದರು.

ಜಗತ್ತಿಗೆ ಯೋಗವನ್ನು ಭಾರತ ಪರಿಚಯಿಸಿಕೊಟ್ಟಿದೆ. ಸಧೃಡ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಸಹಕಾರಿಯಾಗಿದೆ. ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಿರುವುದು ಸಂತಸ ತಂದಿದೆ.

-ಅಜಿತ್, ಯೋಗ ಶಿಕ್ಷಕ, ಸೇವಾ ಭಾರತಿ ಶಿಕ್ಷಣ ಸಂಸ್ಥೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net