ಪರಂಪರೆಗೆ ಧಕ್ಕೆಯಾಗದಂತೆ ಪ್ರಾಧಿಕಾರ ರಚಿಸಿ

Ugranarasime Gowda
Published on

ಚಾಮರಾಜನಗರ: ರಾಜ್ಯ ಸರ್ಕಾರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶ್ರೀಮಂಟೇಸ್ವಾಮಿ, ಶ್ರೀರಾಚಪ್ಪಾಜಿ ಮತ್ತು ಶ್ರೀಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ತೀರ್ಮಾನ ಕೈಗೊಂಡಿದ್ದು, ಪರಂಪರೆಗೆ ಧಕ್ಕೆಯಾಗದಂತೆ ಪ್ರಾಧಿಕಾರವನ್ನು ರಚಿಸಬೇಕು ಎಂದು ಶ್ರೀಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಉಗ್ರನರಸಿಂಹೇಗೌಡ ಆಗ್ರಹಿಸಿದರು.

ಜಿಲ್ಲೆಯ ಶ್ರೀಮಂಟೇಸ್ವಾಮಿ ನೀಲಗಾರ ಪರಂಪರೆ, ಜನಪದ ಕಾವ್ಯ ನಾಡಿನ ವಿಶಿಷ್ಟವಾದ ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ಈ ಪರಂಪರೆಯ ಆಚರಣೆಯಲ್ಲಿ ಮುಕ್ತವಾದ ಆಹಾರ ಪದ್ಧತಿ, ಲಿಂಗ ಸಮಾನತೆ ಹಾಗೂ ಪ್ರಜಾಪ್ರಭುತ್ವದ ಆಶಯಗಳು ಅಡಗಿದೆ. ಸಂವಿಧಾನದ ಮೌಲ್ಯಗಳ ಅನುಷ್ಠಾನವನ್ನು ಇದರಲ್ಲಿ ಕಾಣಬಹುದಾಗಿದೆ. ಇಂತಹ ಪರಂಪರೆಯ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಧಿಕಾರ ರಚಿಸುವ ಸರ್ಕಾರದ ತೀರ್ಮಾನ ಸ್ವಾಗತಾರ್ಹವಾಗಿದೆ. ಆದರೇ ಈ ಪರಂಪರೆಯ ಯಾವುದೇ ಆಶಯಕ್ಕೂ ಧಕ್ಕೆಯಾಗದಂತೆ ಪ್ರಾಧಿಕಾರ ರಚನೆ ಮಾಡಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಬೊಪ್ಪೇಗೌಡನಪುರ ಮಠದ ಶ್ರೀಜ್ಞಾನಾನಂದ ಅರಸು ಮತ್ತು ಮಳವಳ್ಳಿ ಮಠದ ವರ್ಚಸ್ವಿ ಶ್ರೀಸಿದ್ಧಲಿಂಗರಾಜೇ ಅರಸು ಅವರು ಪ್ರಾಧಿಕಾರ ರಚನೆಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಶ್ರೀಮಂಟೇಸ್ವಾಮಿ ಪರಂಪರೆಗೆ ವಿರುದ್ಧವಾಗಿ ಮಠಾಧೀಶರೇ ನಡೆದುಕೊಳ್ಳುತ್ತಿದ್ದು, ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ಆಗೇ ಸರ್ಕಾರ ಪ್ರಾಧಿಕಾರದ ಹೆಸರಿನಲ್ಲಿ ಎಲ್ಲರನ್ನೂ ಒಳಗೊಳ್ಳುವ ಆಚರಣೆಗಳಿಗೆ ಅಡ್ಡಪಡಿಸಬಾರದು. ಮಠಾಧೀಶರು, ನೀಲಗಾರ ಒಕ್ಕಲಿನವರು, ಸಂಶೋಧಕರು ಹಾಗೂ ಜನಪದರನ್ನು ಪ್ರಾಧಿಕಾರ ಒಳಗೊಳ್ಳಬೇಕು ಎಂದರು.

ಗೋಷ್ಠಿಯಲ್ಲಿ ಹೋರಾಟ ಸಮಿತಿಯ ಶಂಭುಲಿಂಗಸ್ವಾಮಿ, ಹಿರಿಯ ಸಾಹಿತಿ ಮದ್ದೂರು ದೊರೆಸ್ವಾಮಿ, ಬಾಳಗುಣಸೆ ಮಂಜುನಾಥ್ ಹಾಜರಿದ್ದರು.

ಸಾಂಸ್ಕೃತಿ ನೀತಿ ಸಂಹಿತೆ ರೂಪಿಸಿ:

ರಾಜ್ಯ ಸರ್ಕಾರ ಶ್ರೀಮಂಟೇಸ್ವಾಮಿ ಪರಂಪರೆಯ ನೀಲಗಾರರು, ಒಕ್ಕಲಿನವರು, ಕಾವ್ಯ ಹಾಡುಗಾರರು, ಮಠದ ಪ್ರತಿನಿಧಿಗಳು, ಸಂಶೋಧಕರು ಹಾಗೂ ವಿದ್ವಾಂಸರ ಜತೆ ಚರ್ಚಿಸಿ ಪ್ರಾಧಿಕಾರಕ್ಕೆ ಒಂದು ಸಾಂಸ್ಕೃತಿಕ ನೀತಿ ಸಂಹಿತೆಯನ್ನು ರೂಪಿಸಬೇಕು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಶಂಕನಪುರ ಮಹದೇವ ಹೇಳಿದರು. ಈ ಪರಂಪರೆಯ ಮಠಾಧೀಶರು ಪ್ರಾಧಿಕಾರ ರಚನೆಯನ್ನು ಸಾಮಾಜಿಕ ಪರಂಪರೆ ಮೇಲಿನ ದಾಳಿ ಎಂದು ಉಲ್ಲೇಖಿಸಿರುವುದು ಅತ್ಯಂತ ಆಕ್ಷೇಪಾರ್ಹವಾಗಿದೆ. ಈ ಕುರಿತು ಮಠಾಧೀಶರು ಜನರಿಗೆ ಪ್ರಚೋದನೆ ನಿಡುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಶ್ರೀಕ್ಷೇತ್ರಗಳ ಪರಂಪರೆ ಮತ್ತು ಅಸ್ಮಿತೆಯನ್ನು ಉಳಿಸಿಕೊಂಡು ಪ್ರಾಧಿಕಾರ ರಚಿಸಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net