

ಚಿತ್ರದುರ್ಗ: ಭರತಮುನಿ ಅವರಿಂದ ಆರಂಭವಾದ ಭರತನಾಟ್ಯ ಪರಂಪರೆ ವಿಶ್ವದೆಲ್ಲೆಡೆ ಖ್ಯಾತಿಗಳಿಸಿದೆ ಎಂದು ದಕ್ಷಿಣ ಪ್ರಾಂತ ಸಂಸ್ಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಡಾ.ಕೆ.ರಾಜೀವಲೋಚನ ಹೇಳಿದರು.
ತರಾಸು ರಂಗಮಂದಿರದಲ್ಲಿ ಭಾನುವಾರ ಸಂಜೆ ನಾಟ್ಯರಂಜನಿ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ನಾಟ್ಯರಂಜನಿ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಯೋಗ, ನೃತ್ಯ, ಸಂಗೀತ ಸೇರಿ ಅನೇಕ ಅದ್ಭುತ ಕಲೆಗಳಿವೆ. ಅವುಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ನಿರಂತರವಾಗಿ ಮುಂದುವರಿದಿದ್ದು, ಪರಂಪರೆ ಉಳಿವಿಗೆ ಸದಾ ಶ್ರಮಿಸಲು ಎಲ್ಲರೂ ಕೈಜೋಡಿಸಿ ಎಂದು ಕೋರಿದರು.
ಕಲಾತಪಸ್ವಿನಿ ಪ್ರಶಸ್ತಿ ಸ್ವೀಕರಿಸಿದ ಅಂಜನಾ ನೃತ್ಯ ಕಲಾ ಕೇಂದ್ರದ ಶಿಕ್ಷಕಿ ವಿದುಷಿ ಡಾ.ನಂದಿನಿ ಶಿವಪ್ರಕಾಶ್ ಮಾತನಾಡಿ, ಪ್ರಾಚೀನ ಕಲೆಗಳಿಂದಾಗಿ ಸಂಸ್ಕಾರ, ಸಂಸ್ಕೃತಿ ಉಳಿದಿದ್ದು, ಇವುಗಳಿಂದ ದೇಶದ ಘನತೆ ಹೆಚ್ಚಾಗಿದೆ. ಮಾನಸಿಕ ಹಾಗೂ ದೈಹಿಕ ಸಬಲತೆ ಸಾಧಿಸಲು ನೃತ್ಯ ಸಹಕಾರಿಯಾಗಿದೆ. ಸಂಗೀತ, ಲಲಿತ ಕಲೆಗಳ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಪಾಲಕರಿಂದ ಆಗಬೇಕು ಎಂದು ಸಲಹೆ ನೀಡಿದರು.
ನಾಟ್ಯ ಸರಸ್ವತಿ ಪ್ರಶಸ್ತಿ ಸ್ವೀಕರಿಸಿದ ಲಾಸಿಕಾ ಫೌಂಡೇಶನ್‌ನ ನೃತ್ಯ ಶಿಕ್ಷಕಿ ಶ್ವೇತಾ ಭಟ್ ಮಾತನಾಡಿ, ಭರತನಾಟ್ಯ ಎಂಬುದು ಕೇವಲ ಹೆಣ್ಣಿಗಷ್ಟೇ ಮೀಸಲಲ್ಲ. ಬೆಂಗಳೂರಿನಲ್ಲಿ ಪುರುಷ ನೃತ್ಯ ಕಲಾವಿದರಿಗೂ ಹೆಚ್ಚು ಬೇಡಿಕೆಯಿದೆ. ಸಂಗೀತ, ನೃತ್ಯ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿದಾಗ ಸರ್ವತೋಮುಖ ಬೆಳವಣಿಗೆಯಾಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಬಾಲಕರ ಪಪೂ ಕಾಲೇಜಿನ ಪ್ರಾಧ್ಯಾಪಕ ಡಾ.ಹೇಮಂತ್ ರಾಜ್, ನಾಟ್ಯರಂಜನಿ ನೃತ್ಯ ಕಲಾ ಕೇಂದ್ರದ ಕಾರ್ಯದರ್ಶಿ ಜಿ.ಕಿರಣ್, ಅಂಜನಾ ನೃತ್ಯ ಕಲಾ ಕೇಂದ್ರದ ಪ್ರಾಚಾರ್ಯ ಶಿವಪ್ರಕಾಶ್, ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ, ಲಾಸಿಕಾ ಫೌಂಡೇಶನ್‌ನ ಮಂಜುನಾಥ ಭಾಗ್ವತ್ ಇದ್ದರು.