

ಮೂಡಿಗೆರೆ: ತಾಲೂಕಿನಲ್ಲಿ 231 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ, ಭದ್ರತೆಗೆ ಪ್ಯಾರಾ ಮಿಲಿಟರಿ, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೂ ಚುನಾವಣಾ ಸಿಬ್ಬಂದಿ ಇವಿಎಂ ಸಾಗಿಸಿದರು.
231 ಮತಗಟ್ಟೆ ಪೈಕಿ 24 ಸೂಕ್ಷ್ಮ, 5 ಅತಿಸೂಕ್ಷ್ಮ, 202 ಸಾಮಾನ್ಯ ಮತಗಟ್ಟೆ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಯಲ್ಲಿ ಪ್ಯಾರಾ ಮಿಲಿಟರಿ, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಸಿಬ್ಬಂದಿ, ಸಾಮಾನ್ಯ ಮತಗಟ್ಟೆಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸ್ಟ್ರಾಂಗ್‌ರೂನ್‌ನಲ್ಲಿರಿಸಿದ್ದ ಇವಿಎಂಗಳನ್ನು ಅಧಿಕಾರಿಗಳು ಎಲ್ಲ ಮತಗಟ್ಟೆಗಳಿಗೂ ಕಳಿಸಿಕೊಟ್ಟರು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಮ್ಯಾಕ್ಸಿಕ್ಯಾಬ್, ಬಾಡಿಗೆ ಜೀಪು ಮತ್ತು ಕಾರುಗಳಲ್ಲಿ ಇವಿಎಂಗಳನ್ನು ಸಿಬ್ಬಂದಿ ಮತಗಟ್ಟೆಗೆ ಸಾಗಿಸಿದರು. ಎಲ್ಲ ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಹಾಗೂ ಮತಗಟ್ಟೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿ ವಾಹನ ಪ್ರವೇಶ ನಿಷೇಧಿಸಲಾಗಿದೆ.
ಮತಗಟ್ಟೆ ಆವರಣದಲ್ಲಿ ರಾಜಕೀಯ ಪಕ್ಷಗಳು ಒಂದು ಟೇಬಲ್ ಹಾಗೂ ಎರಡು ಕುರ್ಚಿಗಳನ್ನು ಮಾತ್ರ ಇಟ್ಟು ಮತದಾರರ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ ಬರೆದುಕೊಡಲು ಅವಕಾಶವಿದೆ. ಅಭ್ಯರ್ಥಿಗಳ ಹೆಸರು, ಪಕ್ಷದ ಚಿಹ್ನೆ ಇರುವ ಚೀಟಿಗಳನ್ನು ಮತಗಟ್ಟೆಯೊಳಗೆ ಕೊಂಡೊಯ್ಯಲು ಅವಕಾಶವಿಲ್ಲ. ಮತದಾರರು ಮೊಬೈಲ್ ಫೋನ್ ಕೊಂಡೊಯ್ಯುವಂತಿಲ್ಲ.
ಮತಗಟ್ಟೆ ಅಧಿಕಾರಿ ತಾಲೂಕು ಚುನಾವಣಾ ಅಧಿಕಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕಾಗಿದೆ. ಮತಗಟ್ಟೆಯ ಕ್ಷಣಕ್ಷಣದ ಮಾಹಿತಿಯನ್ನು ತಾಲೂಕು ಕೇಂದ್ರದಲ್ಲಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದ ಪ್ರದೇಶದಲ್ಲಿ ಬದಲಿ ವ್ಯವಸ್ಥೆ ಮಾಡಲಾಗಿದೆ.
ವೃದ್ಧರು, ಅಂಗವಿಕಲರಿಗೆ ಸರತಿ ಸಾಲಿನಿಂದ ವಿನಾಯಿತಿಯಿದೆ. ಮಹಿಳೆಯರಿಗೆ ಪ್ರತ್ಯೇಕ ಸರತಿ ವ್ಯವಸ್ಥೆ ಮಾಡಲಾಗಿದೆ. ಕಂದಾಯ ಇಲಾಖೆಯ 25, ಪೊಲೀಸ್ ಇಲಾಖೆಯ 15 ಸೆಕ್ಟರ್ ವಾಹನ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಎಲ್ಲ ಮತಗಟ್ಟೆಗಳಿಗೂ ಆಗಾಗ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಲಿದೆ. ತಾಲೂಕಿನ ಎಲ್ಲ ಮದ್ಯದ ಅಂಗಡಿಗಳನ್ನು ಮತದಾನ ಮುಗಿಯುವವರೆಗೂ ಮುಚ್ಚಲಾಗಿದೆ. ಮೂಡಿಗೆರೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ವಾರದ ಸಂತೆ ರದ್ದುಪಡಿಸಲಾಗಿದೆ.