

ಸಂತೋಷ ಮುರಡಿ ಮುಂಡರಗಿ
ಇವರಿಬ್ಬರು ಸ್ನೇಹಿತರು, ಒಟ್ಟಿಗೆ ಅಭ್ಯಾಸ ಮಾಡಿ ಒಮ್ಮೆಗೆ ಪೊಲೀಸ್ ನೌಕರಿ ಪಡೆದುಕೊಂಡವರು. ಆದರೆ, ವಿಧಿಬರಹವೂ ಘೊರವಾಗಿ ಬಾರದ ಲೋಕಕ್ಕೆ ಜೊತೆಯಲ್ಲೇ ತೆರಳಿದ ಪೇದೆಗಳಿಬ್ಬರ ಮನಕಲುಕುವ ಕತೆ ಇದು.
ಮುಂಡರಗಿ ಪೊಲೀಸ್ ಠಾಣೆಯ ಪೇದೆಗಳಾದ ನಾಗರಹಳ್ಳಿ ಗ್ರಾಮದ ನಿಂಗಪ್ಪ ಹಲವಾಗಲಿ ಮತ್ತು ಹಮ್ಮಿಗಿ ಗ್ರಾಮದ ಮಹೇಶ ವಕ್ರದ ಇಬ್ಬರೂ ( ಸೆ. 5ರಂದು) ಗಜೇಂದ್ರಗಡದಲ್ಲಿ ರೈತರು ಹಮ್ಮಿಕೊಂಡಿದ್ದ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯ ಬಂದೋಬಸ್ತ್ಗೆಂದು ತೆರಳಿದ್ದರು. ಅಂದು ರಾತ್ರಿ ವಾಪಸ್ ಮುಂಡರಗಿಗೆ ಬರುವಾಗ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತೊಂಡಿಹಾಳ ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದರು.
ಮಂಗಳವಾರ ನಿಂಗಪ್ಪನ ಹಾಗೂ ಬುಧವಾರ ಮಹೇಶನ ಶವ ಪತ್ತೆಯಾಗಿದೆ. ಅವರವರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಕುಟುಂಬಸ್ಥರ ಆಕ್ರಂದನ ಹೇಳ ತೀರದಾಗಿತ್ತು.
ನಾಗರಹಳ್ಳಿ ಗ್ರಾಮದ ನಿಂಗಪ್ಪ ಹಲವಾಗಲಿ ಮೂಲತಃ ಬಡ ಕುಟುಂಬದಿಂದ ಬಂದವರು. ಕೂಲಿ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡಿ ಪೊಲೀಸ್ ನೌಕರಿಗೆ ಬಂದವರು. ಸಹೋದರ, ಸಹೋದರಿ ಮತ್ತು ತಂದೆ, ತಾಯಿ ಜವಾಬ್ದಾರಿಯನ್ನು ಹೊತ್ತಿದ್ದ ನಿಂಗಪ್ಪ ಬಾರದ ಲೋಕಕ್ಕೆ ತೆರಳಿದ್ದು, ಇಡೀ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಕೇವಲ 30 ಗುಂಟೆ ಜಮೀನು, ತಗಡಿನ ಮನೆ ಹೊಂದಿದ್ದ ನಿಂಗಪ್ಪ, ಮನೆ ಕಟ್ಟಿಸಿ ಕುಟುಂಬವನ್ನು ಚೆನ್ನಾಗಿ
ನೋಡಿಕೊಳ್ಳಬೇಕು ಎಂಬ ಮಹದಾಸೆ ಹೊಂದಿದ್ದರು. ಆದರೆ, ವಿಧಿಬರಹಕ್ಕೆ ಈಗ ಕನಸು ಕಮರಿ ಹೋಗಿದೆ.
ಹಮ್ಮಿಗಿ ಗ್ರಾಮದ ಪೇದೆ ಮಹೇಶ ವಕ್ರದ ಅವರ ತಾಯಿ ಅನ್ನಪೂರ್ಣಮ್ಮ ಕೂಲಿ ಕೆಲಸ ಮಾಡಿ ಮಗನನ್ನು ಓದಿಸಿದ್ದರು. ಮಗನಿಗೆ ಪೊಲೀಸ್ ನೌಕರಿ ಸಿಕ್ಕಾಗ ತಾಯಿಗೆ ಮಹಾದಾನಂದವಾಗಿತ್ತು. ಮಹೇಶ ನೌಕರಿ ಪಡೆಯುವುದಕ್ಕೂ ಮುನ್ನ ಒಬ್ಬ ಸಹೋದರಿಯ ಮದುವೆ ಮಾಡಲಾಗಿತ್ತು. ಮಹೇಶನಿಗೆ ನೌಕರಿ ದೊರೆತ ನಂತರ ಮತ್ತೊಬ್ಬ ತಂಗಿಯ ಮದುವೆ ಮಾಡಿ, ಕೂಲಿ ಕೆಲಸಕ್ಕೆ ತೆರಳುತ್ತಿದ್ದ ತಾಯಿಯನ್ನು ಮನೆಯಲ್ಲಿರುವಂತೆ ಸೂಚಿಸಿದ್ದ. ಪೊಲೀಸ್ ಅಧಿಕಾರಿಯಾಗಬೇಕು ಎಂದು ಕನಸು ಕಟ್ಟಿಕೊಂಡು ಹೆಚ್ಚಿನ ಅಭ್ಯಾಸದಲ್ಲಿ ತೊಡಗಿದ್ದ. ಆತನಿಗೂ ಮದುವೆ ಮಾಡಿಸಬೇಕೆಂಬ ತಯಾರಿಯಲ್ಲಿ ತಾಯಿ ಇದ್ದರು. ಆದರೆ, ವಿಧಿಯಾಟ ಬೇರೆಯದೇ ಆಗಿದ್ದು, ಮನೆಗೆ ಆಸರೆಯಾಗಿದ್ದ ಮಗನನ್ನು ವಿಧಿ ಕರೆದೊಯ್ದಿದ್ದು ಆ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.
ನಿಂಗಪ್ಪ ಹಾಗೂ ಮಹೇಶ ಇಬ್ಬರೂ ಸ್ಥಳೀಯ ಜೆ.ಎ. ಕಾಲೇಜ್ನಲ್ಲಿ ಪಿಯುಸಿ ಅಭ್ಯಾಸ ಮಾಡಿದ್ದರು. ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. 2015-2016ರಲ್ಲಿ ಏಕಕಾಲಕ್ಕೆ ಪೊಲೀಸ್ ವೃತ್ತಿಗೆ ಸೇರಿದ್ದರು. ನಿಂಗಪ್ಪ ಮೊದಲು ಗಜೇಂದ್ರಗಡದಲ್ಲಿ ನೌಕರಿ ಮಾಡಿ ಐದಾರು ತಿಂಗಳ ಹಿಂದೆ ಮುಂಡರಗಿಗೆ ಬಂದಿದ್ದ. ಮಹೇಶ ಕೂಡ ಲಕ್ಷ್ಮೇಶ್ವರದಲ್ಲಿ ನೌಕರಿ ಮಾಡಿ ಒಂದು ವರ್ಷದ ಹಿಂದೆ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದರು.
ಮುಂಡರಗಿ ಪೊಲೀಸ್ ಠಾಣೆಯ ಪೇದೆಗಳಿಬ್ಬರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಹೆಚ್ಚಿನ ಮುತುವರ್ಜಿ ವಹಿಸಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು. | ಶಿವಪ್ರಕಾಶ ದೇವರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ