

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸುರೇಶ್ ಅವರು ಶುಕ್ರವಾರ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು. ಪೌರಕಾರ್ಮಿಕನಿಂದ ಎನ್ಒಸಿ, ಖಾತೆ ಸೇರಿದಂತೆ ಆರ್ಥಿಕ ಮೂಲದ ಕೆಲಸ ಕಾರ್ಯಗಳನ್ನು ಮಾಡಿಸುತ್ತಿದ್ದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣ ಪಂಚಾಯಿತಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ ವೇಳೆ ಮುಖ್ಯಾಧಿಕಾರಿ ನಾಗಭೂಷಣ್ ಕಚೇರಿಯಲ್ಲಿರಲಿಲ್ಲ. ವಿಷಯ ತಿಳಿದ ಮುಖ್ಯಾಧಿಕಾರಿ ಕಚೇರಿಗೆ ದೌಡಾಯಿಸಿ ಬಂದಾಗ "ಏನ್ರಿ, ಹಾಜರಾತಿ ಪುಸ್ತಕಕ್ಕೂ ಸಹಿ ಹಾಕಿಲ್ಲ. ಮೂಮೆಂಟ್ ರಿಜಿಸ್ಟರ್ಗೂ ಎಂಟ್ರಿ ಮಾಡದೆ ಹೋಗಿದ್ದೀರಿ. ಹೀಗಿರುವಾಗ ನಾವು ಏನೆಂದು ತಿಳಿಯಬೇಕು. ಕಚೇರಿ ನಿಯಮ ಹೀಗೇನಾ?' ಎಂದು ತರಾಟೆಗೆ ತೆಗೆದುಕೊಂಡರು.
ನಂತರ ಡಾಂಗಲ್ ಕೊಡಿ ಎಂದು ಕೇಳಿದಾಗ ತಬ್ಬಿಬ್ಬಾದ ಮುಖ್ಯಾಧಿಕಾರಿ, ಡಿ.ಗ್ರೂಪ್ ನೌಕರ ಹರೀಶ್ ಬಳಿ ತೆಗೆದುಕೊಂಡು ಬರುವಂತೆ ಸಿಬ್ಬಂದಿಗೆ ತಿಳಿಸಿದರು. ಇದರಿಂದ ಗರಂ ಆದ ಇನ್ಸ್ಪೆಕ್ಟರ್, ನಿಮ್ಮ ಬಳಿ ಇರಬೇಕಾರ ಡಾಂಗಲ್ ಯಾರ್ಯಾರದೋ ಬಳಿ ಕೊಟ್ಟಿದ್ದೀರಾ, ಏನ್ ನಡೀತಿದೆ ಕಚೇರಿಯಲ್ಲಿ ಎಂದು ಖಾರವಾಗಿ ಪ್ರಶ್ನಿಸಿದರು. ಅಷ್ಟರಲ್ಲಿ ಕಂಪ್ಯೂಟರ್ ಆಪರೇಟರ್ ಆನಂದ್ ಬಳಿ ಇದ್ದ ಡಾಂಗಲ್ ಬುಕ್ ಅನ್ನು ಹರೀಶ್ ತಂದು ಕೊಟ್ಟರು. ತಕ್ಷಣ ಆನಂದ್ ಅವರನ್ನು ಕರೆಸಿ ಇಲ್ಲಿ ಚ್ೀ ಆಫೀಸರ್ ಕೆಲಸ ನೀನು ಮಾಡ್ತಿದ್ದಿಯಂತೆ. ಮನೆಯಲ್ಲೇ ಕೆಲವರ ಕೆಲಸ ಮಾಡಿಕೊಡ್ತಿದ್ದಿಯಂತೆ, ಕಚೇರಿಯಲ್ಲಿ ನಿನ್ನ ಕೆಲಸ ಏನು ಎಂದು ಪ್ರಶ್ನಿಸಿದರು. ನಾನು ಕಂಪ್ಯೂಟರ್ ಆಪರೇಟರ್ ಆಗಿದ್ದೇನೆ ಎಂದಾಗ ಆರ್ಡರ್ ಕಾಪಿ ಕೊಡು ಎಂದು ಗರಂ ಆದರು. ಆಗ ನಾನು ಪೌರಕಾರ್ಮಿಕ, ಮುಖ್ಯಾಧಿಕಾರಿ ಸೂಚನೆ ಮೇರೆಗೆ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದೇನೆ ಎಂದಾಗ ನಿನ್ನ ಬಗ್ಗೆ ಎಲ್ಲ ತಿಳಿದುಕೊಂಡೇ ನಾನು ಇಲ್ಲಿಗೆ ಬಂದಿರೋದು ಎಂದು ಇನ್ಸ್ಪೆಕ್ಟರ್ ಸುರೇಶ್ ತಿಳಿಸಿದರು.
ಆನಂದ್ ಪರ ಪಪಂ ಸದಸ್ಯರ ವಕಾಲತು: ಲೋಕಾಯುಕ್ತ ಅಧಿಕಾರಿಗಳು ಪೌರಕಾರ್ಮಿಕ ಆನಂದ್ ಅವರನ್ನು ವಿಚಾರಣೆ ಮಾಡುತ್ತಿರುವ ಸಂದರ್ಭದಲ್ಲಿ ಪಪಂ ಸದಸ್ಯರಾದ ದಯಾನಂದ್ ಹಾಗೂ ರಾಜುಬಡಗಿ ಅವರು ಆನಂದ್ ಪರ ವಕಾಲತ್ತು ವಹಿಸಿದರು. ಸಿಬ್ಬಂದಿ ಕೊರತೆಯಿಂದ ಸಾಮಾನ್ಯ ಸಭೆಯಲ್ಲಿ ರ್ನಿಣಯಿಸಿ ಇವರಿಂದ ಕೆಲಸ ಮಾಡಿಸುತ್ತಿರುವುದಾಗಿ ಹೇಲಿದು. "ಈತ ಹಾರ್ಡ್ ವರ್ಕರ್. ಈತ ಇಲ್ಲದಿದ್ದರೆ ಕಷ್ಟ ಆಗುತ್ತಿತ್ತು' ಎಂದಾಗ ಪ್ರತಿಕ್ರಿಯಿಸಿದ ಇನ್ಸ್ಪೆಕ್ಟರ್, "ನೀವು ರ್ನಿಣಯಿಸಿರಬಹುದು. ಆದರೆ ಮೇಲಧಿಕಾರಿಗಳಿಂದ ಆದೇಶ ಬಂದಿದೆಯೇ?. ಬಂದಿದ್ದರೆ ಪ್ರತಿ ಕೊಡಿ. ನೀವು ಅನೇಕರನ್ನು ನೇಮಿಸಿಕೊಂಡು ಕೆಲಸ ಮಾಡಿಸುತ್ತಿದ್ದೀರಿ. ಆದರೆ ಇವನೊಬ್ಬನ ಬಗ್ಗೆ ದೂರು ಬಂದಿದೆ ಎಂದರೆ ಏನೋ ನಡೀತಿದೆ ಅಂತ ಅಲ್ವಾ?. ದಾಖಲೆಗಳು ಇಲ್ಲದೆ ನಾವು ಸುಮ್ಮನೆ ಮಾತಾಡೊಲ್ಲ. ನಮ್ಮ ಬಳಿ ಎಲ್ಲ ಇದೆ ಎಂದು ಸದಸ್ಯರನ್ನು ಆಚೆ ಕಳುಹಿಸಿ ವಿಚಾರಣೆ ಮುಂದುವರಿಸಿದರು.
ಬಸ್ ನಿಲ್ದಾಣದಲ್ಲಿ ಮತ್ತೆ ಅಕ್ರಮ ಗೂಡಂಗಡಿ: ಈ ಹಿಂದೆ ನಾನು ಚಿಕ್ಕನಾಯಕನಹಳ್ಳಿ ಸಿಪಿಐ ಆಗಿದ್ದೆ. ಆಗ ಮುಖ್ಯಾಧಿಕಾರಿಗಳ ಮನವಿ ಮೇರೆಗೆ ಬಂದು ಬಸ್ ನಿಲ್ದಾಣದ ಅಕ್ರಮ ಗೂಡಂಗಡಿಗಳನ್ನು ತೆರವು ಮಾಡಿಸಿದ್ದೆವು. ಈಗ ಮತ್ತೆ ಹಿಂದಿನಂತೆ ಅಂಗಡಿ ಇಟ್ಟುಕೊಳ್ಳಲು ಬಿಟ್ಟಿದ್ದೀರಿ. ನಿಲ್ದಾಣದಲ್ಲಿ ಶೌಚಗೃಹ ಸರಿ ಇಲ್ಲ. ಕುಡಿಯಲು ನೀರಿಲ್ಲ, ಖಾತೆ ಮಾಡಿ ಕೊಡಲು 2 ವರ್ಷಗಳಿಂದ ಅಲೆಸುತ್ತಿದ್ದೀರಿ, ಒಂದೇ ಎರಡೆ, ನಿಮ್ಮ ಮೇಲೆ ಜನರು ಆರೋಪಿಸುತ್ತಿರುವುದು ಎಂದು ತರಾಟೆಗೆ ತೆಗೆದುಕೊಂಡರು.
ದಾಖಲೆ ಇದೆ ಬೇಕಾ?: ಸಿಬ್ಬಂದಿ ಕೊರತೆ ಇರುವ ಕಾರಣ ಇವರಿಂದ ಕೆಲಸ ಮಾಡಿಸುತ್ತಿದ್ದೇನೆ ಎಂದು ಮುಖ್ಯಾಧಿಕಾರಿ ನಾಗಭೂಷಣ್ ಸಮಜಾಯಿಷಿ ನೀಡಿದಾಗ ಗರಂ ಆದ ಇನ್ಸ್ಪೆಕ್ಟರ್, ಮನೆಯಲ್ಲೇ ಮಾಡಿಕೊಡುವಂತೆ ಹೇಳಿದ್ದೇಕೆ?. ನಾನು ಕಳುಹಿಸಿದ್ದ ವ್ಯಕ್ತಿಗೆ ಮನೆಯಲ್ಲೇ ಈತ ಕೆಲಸ ಮಾಡಿಕೊಟ್ಟಿರುವ ಬಗ್ಗೆ ದಾಖಲೆ ನನ್ನ ಬಳಿ ಇದೆ, ಬೇಕಾ ಎಂದು ಇನ್ಸ್ಪೆಕ್ಟರ್ ಪ್ರಶ್ನಿಸಿದರು. ನಾನು ಕಳೆದ ವರ್ಷ ಜುಲೈನಲ್ಲೇ ಭೇಟಿ ನೀಡಿ ಕಚೇರಿಯಲ್ಲಿ ನಡೆಯುತ್ತಿರುವ ಗೋಲ್ಮಾಲ್ ಬಗ್ಗೆ ಸಾರ್ವಜನಿಕರು ನೀಡಿರುವ ದೂರಿನ ಬಗ್ಗೆ ತಿಳಿಸಿ ಎಲ್ಲವನ್ನು ಸರಿಪಡಿಸಿಕೊಂಡು ಹೋಗಲು ತಿಳಿಸಿದ್ದೇನೆ. ಅದರಲ್ಲೂ ಆರ್ಥಿಕ ಮೂಲದ ಕೆಲಸಗಳನ್ನು ಪೌರಕಾರ್ಮಿಕರ ಬಳಿ ಮಾಡಿಸುತ್ತಿರುವ ಬಗ್ಗೆಯೂ ತಿಳಿಸಿ ಬದಲಾಯಿಸುವಂತೆ ಸೂಚಿಸಿದ್ದರೂ ಅದೇ ಚಾಳಿ ಮುಂದುವರಿಸಿದ್ದೀರಿ. ಇಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಲೋಕಾಯುಕ್ತರಿಗೆ ವರದಿ ಕೊಡುವುದಾಗಿ ತಿಳಿಸಿ ಸಿಬ್ಬಂದಿಗಳಿಂದ ಹೇಳಿಕೆ ಬರೆಸಿಕೊಂಡು ನಿರ್ಗಮಿಸಿದರು.