ಪಪಂ ಮಳಿಗೆ ಛಾವಣಿ ಕುಸಿದು ಮಹಿಳೆಗೆ ಗಾಯ

MDG roof
ಕಟ್ಟಡದ ಆರ್‌ಸಿಸಿ ತಳಭಾಗ ಕುಸಿದು ಕಬ್ಬಿಣ ಕಾಣುತ್ತಿರುವುದು.
Published on

ಮೂಡಿಗೆರೆ: ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಪಟ್ಟಣ ಪಂಚಾಯಿತಿಯ ಹಳೇ ವಾಣಿಜ್ಯ ಮಳಿಗೆಯ ಒಂದು ತುದಿ ಕುಸಿದು ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದೆ.

ತತ್ಕೊಳ ರಸ್ತೆಗೆ ಹೊಂದಿಕೊಂಡಿರುವ ಜಾಗದಲ್ಲಿ ಪಪಂ 30 ವರ್ಷದ ಹಿಂದೆ ನಿರ್ಮಿಸಿರುವ ವಾಣಿಜ್ಯ ಕಟ್ಟಡದ ಎಲ್ಲ 13 ಮಳಿಗೆಗಳಲ್ಲಿ ಅಂಗಡಿಗಳಿದ್ದು ವರ್ತಕರು ವ್ಯಾಪಾರ ನಡೆಸುತ್ತಿದ್ದಾರೆ. ಗುರುವಾರ ಸಂಜೆ 4ಕ್ಕೆ ಕಟ್ಟಡದ ಮೂಲೆಯಲ್ಲಿರುವ ಹಣ್ಣಿನ ಅಂಗಡಿ ಮುಂಭಾಗದಲ್ಲಿ ಜನಜಂಗುಳಿಯಿದ್ದಾಗ ಕಟ್ಟಡದ ತುದಿ ಮಹಿಳೆ ಮೇಲೆ ಕುಸಿದಿದ್ದರಿಂದ ಮಹಿಳೆಯ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ.

ಕಟ್ಟಡದ ಮೇಲಂತಸ್ತಿನ ಮೆಟ್ಟಿಲುಗಳ ಮೇಲ್ಭಾಗ ಆಗಾಗ ಕುಸಿಯುತ್ತಿದೆ. ಇದರಿಂದ ಗ್ರಾಹಕರು ಖರೀದಿಗೆಂದು ಅಂಗಡಿಗಳಿಗೆ ತೆರಳಲು ಭಯಪಡುತ್ತಿದ್ದಾರೆ. ವ್ಯಾಪಾರಿಗಳು ಕೂಡ ಜೀವ ಭಯದಲ್ಲಿ ವ್ಯಾಪಾರ ನಡೆಸಬೇಕಾಗಿದೆ. ವಾಣಿಜ್ಯ ಮಳಿಗೆ ಕಟ್ಟಡವನ್ನು ನಿರ್ಮಿಸಿದ ಬಳಿಕ ಇದುವರೆಗೂ ದುರಸ್ತಿಪಡಿಸಿಲ್ಲ. ಕಟ್ಟಡ ಶಿಥಿಲಗೊಂಡಿರುವುದರಿಂದ ಕುಸಿದಿದೆ. ಕೆ.ಎಂ.ರಸ್ತೆಯಲ್ಲಿದ್ದ ಪಪಂನ ಎರಡು ಹಳೆಯ ಶಿಥಿಲಗೊಂಡಿದ್ದ ಕಟ್ಟಡಗಳು ಕುಸಿಯಲು ಆರಂಭಿಸಿದ್ದರಿಂದ 2 ವರ್ಷದ ಹಿಂದೆ 2 ವಾಣಿಜ್ಯ ಮಳಿಗೆಗಳ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಆರಂಭಿಕವಾಗಿ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಅಲ್ಲಿ ಇದುವರೆಗೂ ಕಟ್ಟಡ ನಿರ್ಮಿಸಲು ಪಪಂ ಆಡಳಿತ ಮುಂದಾಗಿಲ್ಲ. ಇದರಿಂದಾಗಿ ಅನುದಾನ ಸರ್ಕಾರಕ್ಕೆ ವಾಪಸಾಗಿದೆ. ಮತ್ತೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕಿ ನಯನಾ ಮೋಟಮ್ಮ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪಪಂನ ಶಿಥಿಲಗೊಂಡಿರುವ ಹಳೆಯ ವಾಣಿಜ್ಯ ಮಳಿಗೆಗಳ ಯಾವುದೇ ಕಟ್ಟಡವನ್ನು ಇದುವರೆಗೂ ದುರಸ್ತಿ ಪಡಿಸುವ ಗೋಜಿಗೆ ಹೋಗದಿರುವ ಪಪಂ ಆಡಳಿತಕ್ಕೆ ವರ್ತಕರು ಮತ್ತು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net