ಪಪಂ ಗೆಲುವಿಗಾಗಿ ವಾಮಾಚಾರ?

23KITTUR1
ಚನ್ನಮ್ಮನ ಕಿತ್ತೂರಿನ ಸೋಮವಾರ ಪೇಟೆಯ ರಸ್ತೆಯ ಮಧ್ಯೆ ವಾಮಾಚಾರದ ತೆಂಗಿನಕಾಯಿ ಬಿದ್ದಿರುವುದು.
Published on

ಚನ್ನಮ್ಮನ ಕಿತ್ತೂರು: ಪಟ್ಟಣ ಪಂಚಾಯಿತಿ ಚುನಾವಣೆ ಗೆಲುವಿಗಾಗಿ ಅಭ್ಯರ್ಥಿಗಳು ವಾಮಾಚಾರದ ಮೊರೆ ಹೋಗಿದ್ದಾರಾ ಎಂಬ ಅನುಮಾನ ಹುಟ್ಟಿದೆ.

ಡಿ.27ರಂದು ನಡೆಯಲಿರುವ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಗೆಲುವಿಗಾಗಿ ನಾನಾ ರೀತಿಯ ಕಸರತ್ತು ನಡೆಯುತ್ತಿದೆ. ಗೆಲುವಿಗಾಗಿ ಅಭ್ಯರ್ಥಿಗಳು ಮನೆ ಮನೆ ಭೇಟಿ ನೀಡುತ್ತಿರುವುದು ಮಾತ್ರವಲ್ಲದೆ, ಮತದಾರರಿಗೆ ವಿವಿಧ ಆಮಿಷ ಒಡ್ಡುತ್ತಿರುವುದು ಸರ್ವೇ ಸಾಮಾನ್ಯ. ಆದರೆ, ಅದೆಲ್ಲಕ್ಕಿಂತ ಮೇಲಾಗಿ ಮೌಢ್ಯದ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.

ಪಟ್ಟಣದ ಸೋಮವಾರ ಪೇಟೆಯ ರಸ್ತೆಯ ಮಧ್ಯೆ ವಾಮಾಚಾರ ಮಾಡಿದ್ದಾರೆನ್ನುವ ದೃಶ್ಯ ಗೋಚರವಾಗಿದೆ. ತೆಂಗಿನಕಾಯಿಗೆ 500 ರೂ. ನೋಟು ಮತ್ತು ಕೆಂಪು ದಾರದಿಂದ ಸುತ್ತಿ ರಸ್ತೆಯ ಮಧ್ಯೆ ಎಸೆದಿದ್ದಾರೆ. ಸಾರ್ವಜನಿಕರು ಇದನ್ನು ಕಂಡು ಆತಂಕಕ್ಕೆ ಒಳಗಾಗಿದ್ದು, ಇಂತಹ ದುಷ್ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಖಂಡರ ಸಾಥ್: ಮತದಾರರ ಮನವೊಲಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಪಕ್ಷದ ಮುಖಂಡರನ್ನು ಪಟ್ಟಣಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕ ಮಹಾಂತೇಶ ದೊಡಗೌಡರ ಹಾಗೂ ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವಿಗಾಗಿ ಪರೇಡ್ ನಡೆಸುತ್ತಿದ್ದಾರೆ.

ಪಕ್ಷೇತರರಿಗೆ ಮುಳುವು: ಪಟ್ಟಣ ಪಂಚಾಯಿತಿಯ 18 ವಾರ್ಡ್‌ಗಳಿಗೆ ಡಿ. 27ರಂದು ಮತದಾನ ನಡೆಯಲಿದ್ದು, ಡಿ. 30ರಂದು ಫಲಿತಾಂಶ ಹೊರಬೀಳಲಿದೆ. ಬಿಜೆಪಿಯಿಂದ 18 ಹಾಗೂ ಕಾಂಗ್ರೆಸ್‌ನಿಂದ 17 ಹಾಗೂ ಪಕ್ಷೇತರರಾಗಿ 9 ಜನ ಕಣದಲ್ಲಿದ್ದಾರೆ.

ಪಕ್ಷದಲ್ಲಿ ಟಿಕೆಟ್ ಸಿಗದ ಕಾರಣ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಮಾತ್ರವಲ್ಲದೆ, ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷಗಳು ಅಖಾಡದಲ್ಲಿರುವುದರಿಂದ ಪಕ್ಷೇತರರಿಗೆ ಮತದಾರ ಮಣೆ ಹಾಕುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

ಪಟ್ಟಣದಲ್ಲಿ ವಾಮಾಚಾರ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ, ನಡುರಸ್ತೆಯಲ್ಲಿ ತೆಂಗಿನಕಾಯಿ ಎಸೆಯುವ ಮೂಲಕ ಮೌಢ್ಯಕ್ಕೆ ಬಲಿಯಾಗುತ್ತಿರುವುದು ಶೋಚನೀಯ. ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಿ ಹೀಗೆ ಮಾಡುವವರು ಕಂಡುಬಂದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು.| ಪ್ರಕಾಶ ಮಠದ, ಪಪಂ ಮುಖ್ಯಾಧಿಕಾರಿ

| ನಾಗರಾಜ ಜೋರಾಪುರ ಚನ್ನಮ್ಮನ ಕಿತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net