ಪದ್ಮಾಸನ ಸ್ಥಿತೆ ದೇವಿ ಪರಬ್ರಹ್ಮ ಸ್ವರೂಪಿಣಿ...

Barageramma Devi
Published on

ಚಿತ್ರದುರ್ಗ: ಸಂಪತ್ತಿನ ಅಧಿದೇವತೆ, ಸರ್ವ ಪಾಪನಾಶಿನಿ, ಹದಿನಾರು ರೂಪಗಳ ಮಹಾಶಕ್ತಿಯಾಗಿರುವ ಮಹಾಲಕ್ಷ್ಮೀ ದೇವಿ ಆರಾಧನೆಯೊಂದಿಗೆ ದೀಪಾವಳಿ ಅಮಾವಾಸ್ಯೆಯನ್ನು ಶುಕ್ರವಾರ ನಗರ ಸೇರಿ ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೆಂಪು ಮತ್ತು ಹಳದಿ ವರ್ಣದ ಪುಷ್ಪಗಳಿಂದ ತಾಯಿ ಭುವನೇಶ್ವರಿ ದೇವಿ ಮಾದರಿಯಲ್ಲೂ ಹಲವು ದೇಗುಲಗಳಲ್ಲಿ ಶಕ್ತಿದೇವತೆಗಳಿಗೆ ಅಲಂಕಾರ ಸೇವೆ ನೆರವೇರಿದವು.

ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಕಣಿವೆ ಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲಗಳಲ್ಲಿ ಪೂಜೆಗಳು ಜರುಗಿದವು. ವಿಶೇಷಾಲಂಕಾರ ಭಕ್ತರ ಕಣ್ಮನ ಸೆಳೆದವು. ಸಾವಿರಾರು ಮಂದಿ ಭೇಟಿ ನೀಡಿ ದರ್ಶನ ಪಡೆದು, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಕಾಳಿಕಮಠೇಶ್ವರಿ, ಮಲೆನಾಡು ಚೌಡೇಶ್ವರಿ, ಸಿಂಗಧೂರು ಚೌಡೇಶ್ವರಿ, ಅಂಬಾಭವಾನಿ, ದಾನಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಗೋಪಾಲಪುರದ ದುರ್ಗಾಪರಮೇಶ್ವರಿ, ಕರುವಿನಕಟ್ಟೆ ವೃತ್ತದ ಅಂತರಘಟ್ಟಮ್ಮ, ಗಾಳಿ ಮಾರಮ್ಮ, ಚಾಮುಂಡೇಶ್ವರಿ, ಅನ್ನಪೂರ್ಣೇಶ್ವರಿ, ಆದಿಶಕ್ತಿ ಮಾತಾ, ಕೋಟೆಯಲ್ಲಿನ ಬನಶಂಕರಮ್ಮ, ಬುರುಜನಹಟ್ಟಿಯ ಬನಶಂಕರಿ, ರೇಣುಕಾಯಲ್ಲಮ್ಮ, ಹಿರೇಗುಂಟನೂರು ದ್ಯಾಮಲಾಂಬ, ಮೆದೇಹಳ್ಳಿ ಭೋವಿ ಕಾಲನಿಯ ಕೊಲ್ಲಾಪುರದಮ್ಮ ದೇವಿ ದೇಗುಲಗಳಲ್ಲೂ ಲಕ್ಷ್ಮೀ ಪೂಜೆ ಅಂಗವಾಗಿ ವಿಶೇಷ ಪ್ರಾರ್ಥನೆಯೊಂದಿಗೆ ದೀಪಾವಳಿ ಆಚರಿಸಲಾಯಿತು.

ವಾಹನ ಮತ್ತು ಎಲೆಕ್ಟ್ರಾನಿಕ್ ಶೋರೂಂಗಳು, ಆಸ್ಪತ್ರೆ, ಕ್ಲಿನಿಕ್, ಔಷಧ ಅಂಗಡಿ, ಹಾರ್ಡ್‌ವೇರ್ ಸೇರಿ ಅಂಗಡಿ-ಮುಂಗಟ್ಟು, ಮಳಿಗೆಗಳನ್ನು ಸಿಂಗರಿಸಿ, ಪೂಜೆ ಸಲ್ಲಿಸಿ, ಗ್ರಾಹಕರಿಗೆ ಸಿಹಿ ವಿತರಿಸಲಾಯಿತು. ರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net