

ಮುದ್ದೇಬಿಹಾಳ: ಪಟ್ಟಣದ ಹೊರವಲಯದಲ್ಲಿರುವ ಪದ್ಮಾವತಿದೇವಿಯ ಮಹಾರಥೋತ್ಸವ ಸೋಮವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖ ಹರ್ಷೋದ್ಘಾರದೊಂದಿಗೆ ನೆರವೇರಿತು.
ಹಡಲಗೇರಿ ಗ್ರಾಮದಿಂದ ತೇರಿನ ಅಲಂಕಾರಕ್ಕೆ ಬಳಸುವ ತೆಂಗಿನ ಪರಕೆ ಮತ್ತು ತೇರಿನ ಚಕ್ರಗಳಿಗೆ ಬಳಸುವ ತಡೆಕಟ್ಟಿಗೆಗಳನ್ನು ವಿಶೇಷವಾಗಿ ಪೂಜಿಸಿ ಡೊಳ್ಳು ವಾದ್ಯ ಸಮೇತ ದೇವಸ್ಥಾನ ಆವರಣಕ್ಕೆ ತರಲಾಯಿತು.
ಈ ವೇಳೆ ತೆಂಗಿನ ಪರಕೆ, ಬಾಳೆ ದಿಂಡು, ಬೃಹತ್ ಹೂಮಾಲೆ ಸಮೇತ ತೇರನ್ನು ಅಲಂಕರಿಸಲಾಯಿತು. ಆ ನಂತರ ಬೃಹತ್ ಮಿಣಿ ಸಿದ್ಧಪಡಿಸಿ ಸಕಲ ಪೂಜಾ ವಿಧಾನಗಳ ನಂತರ, ಆಚಾರ್ಯರ ಪ್ರಥಮ ಹಸ್ತಸ್ಪರ್ಷದೊಂದಿಗೆ ಭಕ್ತರು ಮಿಣಿ ಹಿಡಿದು ತೇರನ್ನು ಎಳೆದರು.
ಈ ವೇಳೆ ಹರಕೆ ಹೊತ್ತಿದ್ದ ಅನೇಕ ಭಕ್ತರು ತೇರಿನ ಮೇಲೆ ಉತ್ತತ್ತಿ ಎಸೆದು ಸಂಭ್ರಮಿಸಿದರು. ಮಹಾರಥೋತ್ಸವಕ್ಕೆ ಯಾವುದೇ ಅಡಚಣೆ ಆಗದಂತೆ ಮುದ್ನಾಳ ಪಾರ್ಶ್ವನಾಥ ತೀರ್ಥಂಕರ, ಪದ್ಮಾವತಿ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಸಕಲ ತಯಾರಿ ಮಾಡಿಕೊಂಡಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ಮುದ್ದೇಬಿಹಾಳ ಪಟ್ಟಣದಲ್ಲಿರುವ ಚಾಮಪ್ಪ ಹೂಲಿ ಟ್ರಸ್ಟ್ ದಿಗಂಬರ ಜೈನ ಬಸದಿಯಿಂದ ಪದ್ಮಾವತಿ ಅಮ್ಮನವರ ದೇವಸ್ಥಾನದವರೆಗೆ ಕಲಶ, ಪಲ್ಲಕ್ಕಿ, ಮಹಾರಥದ ಹಗ್ಗದ ಮೆರವಣಿಗೆ, ಉತ್ಸವ ಮೂರ್ತಿಗಳ ರಥಾರೋಹಣ ನೆರವೇರಿಸಲಾಗಿತ್ತು.