

ಕೊಳ್ಳೇಗಾಲ: ಈಗಾಗಲೇ ರಚನೆಯಾಗಿರುವ ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳ ಪಟ್ಟಿ ಅಸಿಂಧುವಾಗಿದೆ ಎಂದು ಸವಿತಾ ಸಮಾಜದ ಮಾಜಿ ಗೌರವಾಧ್ಯಕ್ಷ ನಾರಾಯಣಶೆಟ್ಟಿ ತಿಳಿಸಿದರು.
ಸಮಾಜದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆ ನ್ಯಾಯ ಸಮ್ಮತವಾಗಿಲ್ಲ. ಸಹಕಾರಿ ಅಧಿಕಾರಿಗಳಿಗೆ ಹಲವಾರು ವರ್ಷಗಳಿಂದ ಸಮಾಜದ ಲೆಕ್ಕ ಪತ್ರ ಮಂಡಿಸಿಲ್ಲ. ಹಾಗಾಗಿ ತಾಲೂಕು ಪದಾಧಿಕಾರಿಗಳ ಆಯ್ಕೆಯಲ್ಲಿ ಲೋಪವಾಗಿದೆ ಎಂದು ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚುನಾವಣೆಯಲ್ಲಿ ಲೋಪವಾಗಿದೆ ಎಂದು ಸಹಕಾರ ಇಲಾಖೆ ಉಪನಿಬಂಧಕರಿಗೆ ದೂರು ಸಲ್ಲಿಸಲಾಗಿದೆ. ರಾಚಶೆಟ್ಟಿ, ಸೋಮಣ್ಣ ಸೇರಿದಂತೆ ಹಲವರು ಸವಿತಾ ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ರಾಚಶೆಟ್ಟಿ ತಾಲೂಕು ಅಧ್ಯಕ್ಷರೆಂದು, ನಾಗೇಶ್ ಮೈಸೂರು ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡು ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.
ವಾಸ್ತವವಾಗಿ ರಾಜ್ಯ ಮಟ್ಟದಲ್ಲಿ ಸವಿತಾ ಸಮಾಜದ ವಿಚಾರದಲ್ಲಿ ತಕರಾರಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ. ರಾಜ್ಯ ಮಟ್ಟದಲ್ಲೇ ಗೊಂದಲವಿರುವ ಕಾರಣ, ತಾಲೂಕು ಮಟ್ಟದಲ್ಲಿ ರಚಿತವಾಗಿರುವ ಪದಾಧಿಕಾರಿಗಳ ಪಟ್ಟಿ ಒಪ್ಪಲಾಗದು. ಈ ಸಂಬಂಧ ಸಹಕಾರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.