

ಕಲಬುರಗಿ: ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ವಿವಿಧ ಮಂಡಲಗಳಿಗೆ ಅಧ್ಯಕ್ಷರ ಆಯ್ಕೆಯಲ್ಲಿ ಕುರುಬ ಸಮಾಜವನ್ನು ಕಡೆಗಣಿಸಲಾಗಿದೆ ಎಂದು ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ರಾಜ್ಯದಲ್ಲಿ ಕೆ.ಎಸ್.ಈಶ್ವರಪ್ಪ ಅವರನ್ನು ವಿಧಾನಸಭೆಗೆ ನಿರಾಕರಿಸಲಾಯಿತು, ಬೀದರ್‌ನ ರಘುನಾಥ ಮಲ್ಕಾಪುರೆ ಅವರನ್ನು ವಿಧಾನಪರಿಷತ್ ಸಭಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಯಿತು. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ತಕ್ಕ ಪಾಠ ಕಲಿತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಗೊಂಡ ಕುರುಬ ಸಮಾಜವಿದೆ. ಆದರೆ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಒಂದು ಟಿಕೆಟ್ ನೀಡಲಿಲ್ಲ, ಪಕ್ಷದಲ್ಲಿ ಹಿರಿಯ ಮುಖಂಡರಿದ್ದರೂ ಒಂದು ಮಂಡಲ ಅಧ್ಯಕ್ಷ ಸ್ಥಾನವನ್ನು ನೀಡಿಲ್ಲ, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎನ್ನುತ್ತಾರೆ. ಆದರೆ ಕುರುಬ ಸಮಾಜದವರಿಗೆ ಸಂಘಟನೆಯಲ್ಲಿ ಅವಕಾಶ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು. ಬಿಜೆಪಿಯೂ ಕೆಲವು ಜಾತಿಗೆ ಸೀಮಿತವಾಗಿದ್ದು, ಅಫಜಲಪುರ, ಆಳಂದ, ಚಿಂಚೋಳಿ, ಕಲಬುರಗಿ ಗ್ರಾಮೀಣ, ಜೇವರ್ಗಿ ಸೇರಿ ಎಲ್ಲ ಕಡೆಯಲ್ಲಿ ಪ್ರಬಲವಾಗಿ ಮಂಡಲ ಅಧ್ಯಕ್ಷರ ಪೈಪೋಟಿಯಲ್ಲಿದ್ದರೂ, ಯಾರನ್ನೂ ಪರಿಗಣಿಸಿಲ್ಲ ಎಂದು ಆರೋಪಿಸಿದರು. ಪ್ರಮುಖರಾದ ಭಗವಂತರಾಯ ಪಾಟೀಲ್, ನಿರ್ಮಲಾ ಬರಗಾಲಿ, ರವಿಗೊಂಡ ಕಟ್ಟಿಮನಿ, ಧರ್ಮರಾಜ ಹೇರೂರ, ಪರಮೇಶ ಆಲಗೂಡ, ಶಿವಲಿಂಗ ವಗ್ಗೆ ಇತರರಿದ್ದರು.