

ಕೆ.ಆರ್.ಪೇಟೆ: ರೈತ ಬುದ್ಧಿವಂತನಾದರೆ ಕೃಷಿಯಲ್ಲಿ ಸಾಧನೆ ಮಾಡಿ ಲಕ್ಷಾಂತರ ರೂ. ಸಂಪಾದಿಸಬಹುದು. ಇದಕ್ಕೆ ತಾಲೂಕಿನ ದೊಡ್ಡಯಾಚೇನಹಳ್ಳಿ ಗ್ರಾಮದ ಡಿ.ಪಿ. ಮೋಹನ್ ಸಾಕ್ಷಿಯಾಗಿದ್ದಾರೆ. ಸಾವಯವ ಪದ್ಧತಿ ಅನುಸರಿಸಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.
ಇವರು ಬೇರೆ ಪ್ರಗತಿಪರ ರೈತರ ತೋಟಕ್ಕೆ ಭೇಟಿ ನೀಡಿ ಸಾವಯವ ಪದ್ಧತಿಯಲ್ಲಿ ಶೂನ್ಯ ಬಂಡವಾಳ ಸಾವಯವ ಕೃಷಿ ಬಗ್ಗೆ ತಿಳಿದು ಪ್ರೇರಣೆಗೊಂಡರು. ನಮ್ಮ ಜಮೀನಿನಲ್ಲಿಯೇ ದುಡಿದರೆ ಭೂಮಿತಾಯಿ ಕೈ ಬಿಡುವುದಿಲ್ಲ ಎಂಬ ಅಚಲ ವಿಶ್ವಾಸದಿಂದ 25 ವರ್ಷಗಳಿಂದ 3.5ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿ ಮಾಡುತ್ತಿದ್ದಾರೆ.
ಬಿಎ ಪದವಿ ಪಡೆದಿರುವ ಮೋಹನ್, ವಿದ್ಯಾನುಭವ ಹಾಗೂ ಕೃಷಿ ತಜ್ಞರ ಸಲಹೆಯಂತೆ ತಮ್ಮ ತೋಟದಲ್ಲಿ ಸಾವಯವ ಗೊಬ್ಬರದ ಬಳಕೆಯೊಂದಿಗೆ ನೀರು ನಿರ್ವಹಣೆಗೆ ಪ್ರಾಮುಖ್ಯತೆ ನೀಡಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ.
ತಮ್ಮ ಸ್ವಲ್ಪ ಜಮೀನನ್ನು ಸಂಪೂರ್ಣ ತೋಟವನ್ನಾಗಿ ಪರಿವರ್ತಿಸಿ, ಅದರಲ್ಲಿ ಮುಖ್ಯ ಬೆಳೆಯಾದ 800 ಅಡಕೆಯೊಂದಿಗೆ 160 ತೆಂಗು, 300 ಏಲಕ್ಕಿ ಬಾಳೆ, 100 ಕಾಳುಮೆಣಸಿನ ಗಿಡ, 1000 ಕೋಕೋ, 70 ವೀಳ್ಯದೆಲೆ, 35 ಬೆಣ್ಣೆ ಹಣ್ಣು, 35 ಜೈಕಾಯಿ, 4 ಸ್ಟಾರ್ ಹಣ್ಣು, ಹಲಸು, ಜಂಬೂನೇರಳೆ ಹಾಗೂ ಚಕ್ಕೋತ ಹಾಗೂ 10 ಗುಂಟೆ ಪ್ರದೇಶದಲ್ಲಿ ಶುಂಠಿಯನ್ನು ಬೆಳೆಯುವ ಮೂಲಕ ಮಿಶ್ರ ಬೆಳೆ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಮಿಶ್ರ ಬೆಳೆಗಳಿಂದ ವಾರ್ಷಿಕವಾಗಿ 6 ಲಕ್ಷ ರೂ. ಗಳಿಸುತ್ತಾರೆ.
ಕೃಷಿ ಜತೆಗೆ ಉಪ ಕಸುಬಾಗಿ ಹೈನುಗಾರಿಕೆಯಲ್ಲಿ ನಾಟಿಕೋಳಿ, ಮೇಕೆ, ಮಲೆನಾಡು ಗಿಡ್ಡ ನಾಟಿ ಹಸು ಸಾಕಣೆ ಮಾಡಿ ಅದರಿಂದ ಸಿಗುವ ಸಗಣಿ, ಗಂಜಲದೊಂದಿಗೆ ಸಾವಯವ ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟಿನ ಮಿಶ್ರಣವನ್ನು ಮಾಡಿಕೊಂಡು ತೋಟದ ಎಲ್ಲ ಬೆಳೆಗಳಿಗೆ ಸಿಂಪಡಿಸುತ್ತಿದ್ದಾರೆ.
ಹನಿ, ತುಂತುರು ನೀರಾವರಿ ಸೌಲಭ್ಯ: ಅವೈಜ್ಞಾನಿಕವಾಗಿ ಬೆಳೆಗಳಿಗೆ ನೀರು ಹಾಯುಸುವುದರಿಂದ ಉತ್ಪಾದನಾ ವೆಚ್ಚವೂ ಹೆಚ್ಚು, ಇಳುವರಿಯೂ ಕಡಿಮೆ. ಗಿಡ-ಮರಗಳ ಆಯಷ್ಯವೂ ಕ್ಷೀಣವಾಗುತ್ತದೆ. ತೋಟದ ಬೆಳೆಯಲ್ಲಿ ಗಿಡಮರಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಒದಗಿಸಿದರೆ ಶೇ.65ರಷ್ಟು ನೀರು ವ್ಯರ್ಥವಾಗುತ್ತದೆ. ರೈತರಿಗೆ ಈ ಬಗ್ಗೆ ತಿಳಿವಳಿಕೆ ಅಗತ್ಯ. ಈ ಹಿನ್ನೆಲೆಯಲ್ಲಿ ಮೋಹನ್ ಅವರು ನೀರು ನಿರ್ವಹಣೆಗಾಗಿ ತುಂತುರು ನೀರಾವರಿ ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ಸಸಿಗಳ ಮಾರಾಟ: ತೋಟದ ಕಳೆಗಳನ್ನು ಕತ್ತರಿಸಿ ಜತೆಗೆ ಹಾಸು ಹೊದಿಕೆಯಾಗಿಸಿದ್ದಾರೆ. ಕೃಷಿ ತಾಜ್ಯಗಳನ್ನು ಪುಡಿ ಮಾಡಿ ಹೊದಿಕೆ ಮಾಡಿ ತೇವಾಂಶವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇವರು ಜೀವಾಮೃತ, ರೋಗ-ಕೀಟ ಬಾಧೆಗೆ ನೀಮಾಸ್ತ್ರವನ್ನು ಉಪಯೋಗಿಸಿ ನಿರ್ವಹಣೆ ಮಾಡುತ್ತಿದ್ದಾರೆ. ಜತೆಗೆ ತೆಂಗು, ಅಡಕೆ ಸಸಿಗಳನ್ನು ನಾಟಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇವುಗಳಿಗೆ ಸ್ಥಳೀಯವಾಗಿ ಬೇಡಿಕೆಯಿದ್ದು ಅಧಿಕ ಆದಾಯ ಪಡೆಯುತ್ತಿದ್ದಾರೆ.
ರೈತರಿಗೆ ಮಾರ್ಗದರ್ಶಕ: ಕೃಷಿ ಸಾಧನೆಗಾಗಿ ಆತ್ಮ ಯೋಜನೆಯಡಿ 2020-21ರಲ್ಲಿ ತಾಲೂಕು ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ 2021-22 ರಲ್ಲಿ ಜಿಲ್ಲಾ ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಅಧ್ಯಯನದಲ್ಲಿ ನಿರತನಾಗಿ ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡು ಆಧುನಿಕತೆಯನ್ನು ಹೆಚ್ಚಿಸಿಕೊಂಡು ಇತರ ರೈತರಿಗೆ ಮಾರ್ಗದರ್ಶಕರಾಗಿದ್ದಾರೆ. ಇವರ ತೋಟಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಹ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೃಷಿ ಮೇಳ ಹಾಗೂ ರೈತರ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದರೊಂದಿಗೆ ದೂರದರ್ಶನ ಮತ್ತು ರೇಡಿಯೋ ಮೂಲಕವಾಗಿ ಕೃಷಿ ಉಪನ್ಯಾಸಗಳನ್ನು ನೀಡುತ್ತಿದ್ದು, ಮಾದರಿ ರೈತರಾಗಿದ್ದಾರೆ. ಕೃಷಿಯಲ್ಲಿ ಮೋಹನ್ ಜತಗೆ ಪತ್ನಿ ಪ್ರೇಮಾ, ತಂದೆ ಆರ್.ಪ್ರಭಾಕರ್, ತಾಯಿ ಸುಲೋಚನಾ ಸಾಥ್ ನೀಡುತ್ತಿದ್ದಾರೆ.
ರೈತರು ಏಕಬೆಳೆ ಪದ್ಧತಿಯಿಂದ ಕೃಷಿ ಮಾಡಿ ನಷ್ಟ ಮಾಡಿಕೊಳ್ಳದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ರೈತರು ಅಧಿಕ ಆದಾಯ ಗಳಿಸಬಹುದು. ಇದರಲ್ಲಿ ಆವರ್ತಕವಾಗಿ ಹಣ ಸಿಗಲಿದೆ. ರೈತರು ನೆಮ್ಮದಿಯಿಂದ ಇರಬಹುದು.
ಪಿ.ಜಿ.ಶ್ರುತಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರು, ಆತ್ಮ ಯೋಜನೆ ಕೃಷಿ ಇಲಾಖೆ
ಒಂದು ಕೃಷಿಯಿಂದ ರೈತ ಆದಾಯ ಗಳಿಸಲು ಸಾಧ್ಯವಿಲ್ಲ. ಸಮಗ್ರ ಕೃಷಿಯಿಂದ ಏನನ್ನಾದರೂ ಸಾಧಿಸಬಹುದು. ತೋಟದಲ್ಲಿ ಹಲವು ಬೆಳೆಗಳಿದ್ದು ಯಾವುದಾದರೂ ಒಂದು ಬೆಳೆಗೆ ಮಾರುಕಟ್ಟೆ ಸಿಗದಿದ್ದರೆ ಉಳಿದವುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗಲಿದ್ದು, ರೈತರಿಗೆ ನಷ್ಟವಾಗಲ್ಲ. ಡಿ.ಪಿ.ಮೋಹನ್ ದೊಡ್ಡಯಾಚೇನಳ್ಳಿ, ಸಾವಯವ ಕೃಷಿಕ.