

ಚಿಕ್ಕಮಗಳೂರು: ಜಿಲ್ಲೆಯ ಪದವೀಧರ ಪತ್ತಿನ ಸಹಕಾರ ಸಂಘದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಸಂಘದ ನಿರ್ದೇಶಕ ಬಿ.ಟಿ.ಗೋಪಾಲಗೌಡ ಒತ್ತಾಯಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡಕ್ಕೆ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಕಾನೂನು ಪ್ರಕಾರ ಟೆಂಡರ್ ಕರೆದಿಲ್ಲ. ಯಾವುದೇ ಟೆಂಡರ್ ಬಂದಿಲ್ಲವೆAದು ತೀರ್ಮಾನಿಸಿ ತಾವೇ ಕಟ್ಟಡಕ್ಕೆ ಬೇಕಾದ ವಸ್ತುಗಳನ್ನು ಕೊಂಡು ಕಟ್ಟಡ ನಿರ್ಮಿಸಲು ತೀರ್ಮಾನಿಸಿದ್ದಾರೆ. ಈ ರೀತಿ ಮಾಡಲು ಸರ್ಕಾರದ ಪರವಾನಗಿ ಪಡೆದಿಲ್ಲ. ಇದು ಕಾನೂನುಬಾಹಿರ ಎಂದು ಆರೋಪಿಸಿದರು.
ಕಟ್ಟಡ ನಿರ್ಮಾಣದ ಎಸ್ಟಿಮೇಟ್ ನಲ್ಲಿ ೯೨ ಲಕ್ಷ ರೂ. ಎಂದು ತೋರಿಸಲಾಗಿತ್ತು. ಆದರೆ ಬಳಿಕ ಕಟ್ಟಡ ನಿರ್ಮಾಣದ ಖರ್ಚು ೧.೨೨ ಕೋಟಿ ರೂ. ಎಂದು ತೋರಿಸಲಾಗಿದೆ. ಎಸ್ಟಿಮೇಟ್ ಗಿಂತ ೩೦ ಲಕ್ಷ ರೂ. ಗೂ ಅಧಿಕ ಖರ್ಚು ಮಾಡಲಾಗಿದೆ. ಹೀಗೆ ಹೆಚ್ಚುವರಿ ಮಾಡಿರುವ ಖರ್ಚನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದಲ್ಲದೆ ಹಳೆಯ ಕಟ್ಟಡದಲ್ಲಿದ್ದ ಪೀಠೋಪಕರಣಗಳನ್ನು ಹರಾಜು ಪ್ರಕ್ರಿಯೆ ನಡೆಸದೆ ನೇರವಾಗಿ ಮಾರಾಟ ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.
ತಂದಕ್ಕೆ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಆಡಳಿತ ಮಂಡಳಿ ಅನುಮೋದನೆ ಬೇಕಾಗಿರುತ್ತದೆ. ಆದರೆ ಸಾಲ ಮಂಜೂರಿ ಸಭೆಯಲ್ಲಿ ಕಾನೂನುಬಾಹಿರವಾಗಿ ಸದಸ್ಯತ್ವ ಪಡೆದು, ತಮಗೆ ಬೇಕಾದವರಿಗೆ ಕೋಟಿಗಟ್ಟಲೆ ಸಾಲ ಮಂಜೂರು ಮಾಡಲಾಗಿದೆ. ಈ ಬಗ್ಗೆ ಸಂಘದ ಅಧ್ಯಕ್ಷರಾದ ಬಿ.ಸಿ.ಲೋಕಪ್ಪ ಗೌಡ ಅವರನ್ನು ಪ್ರಶ್ನಿಸಿದರೆ ತುರ್ತಾಗಿ ಸಾಲ ಬೇಕಾಗಿರುವುದರಿಂದ ಈ ರೀತಿ ಮಾಡಲಾಗಿದೆ. ಇನ್ನು ಮುಂದೆ ಸದಸ್ಯತ್ವವನ್ನು ಸಾಲದ ಕಮಿಟಿಯಲ್ಲಿ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ. ಇದು ಕಾನೂನು ಬಾಹಿರವಾಗಿದೆ ಎಂದು ಆಪಾದಿಸಿದರು.
ಸಾಲ ಮಂಜೂರು ಮಾಡುವಾಗ ಮರುಪಾವತಿ ಅರ್ಹತೆಯನ್ನು ಪರಿಗಣಿಸದೆ ಕೋಟಿಗಟ್ಟಲೆ ಸಾಲ ನೀಡಲಾಗಿದೆ. ಸಾಲ ಕೊಡುವ ಮೊದಲು ಸಾಲಗಾರರ ಮನೆ ಅಥವಾ ಆಸ್ತಿಯ ಬಗ್ಗೆ ಸ್ಥಳ ತನಿಖೆ ನಡೆಸಿಲ್ಲ. ಪ್ರತಿ ತಿಂಗಳು ಸಾಲ ವಸೂಲಾತಿ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇದಲ್ಲದೆ ಸಹಕಾರ ಸಂಘದಲ್ಲಿ ಭಾರಿ ಪ್ರಮಾಣದ ಹಣ ದುರುಪಯೋಗ ಹಾಗೂ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.