

ದೊಡ್ಡಬಳ್ಳಾಪುರ: ಕೃಷಿ ವಿಜ್ಞಾನ ಪದವೀಧರರು ಕೃಷಿ ಅಧಿಕಾರಿಗಳಾಗಬೇಕೆಂಬ ಆಕಾಂಕ್ಷೆ ಜತೆಗೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ತಾಲೂಕಿನ ವಡ್ಡರಹಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ಹಾಗೂ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಕೃಷಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣದ ಅವಶ್ಯಕತೆ ಇದ್ದು, ಗ್ರಾಮೀಣ ಕೃಷಿ ಕಾರ್ಯಾನುಭವಇದಕ್ಕೆ ಇಂಬು ನೀಡುತ್ತದೆ. ಶಿಬಿರದಲ್ಲಿ ಶಿಬಿರಾರ್ಥಿಗಳ ಮತ್ತು ಗ್ರಾಮಸ್ಥರ ಜತೆಗಿನ ಭಾವನಾತ್ಮಕ ಒಡನಾಟ ಸದಾ ಸ್ಮರಣೆಯಲ್ಲಿರುತ್ತದೆ. ಕೃಷಿ ಪದವಿ ಪಡೆದವರು ಅಧಿಕಾರಿಗಳಾಗಲು ಹಾತೊರೆಯದೇ ಉತ್ತಮ ಕೃಷಿಕರಾಗಿ ಕಾರ್ಯ ನಿರ್ವಹಿಸಿದರೆ ಕೃಷಿಕರಿಗೆ ಮಾದರಿಯಾಗುತ್ತದೆ. ಕೃಷಿ ಪದವಿ ಪಡೆದವರು ರೈತರಿಗೆ ಕಾಲಕಾಲಕ್ಕೆ ಅಗತ್ಯ ಮಾಹಿತಿ ನೀಡಿ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.
ಕೃಷಿ ವಿವಿಯ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಡಾ.ಎನ್.ಶ್ರೀನಿವಾಸ್ ಮಾತನಾಡಿ, ಕೃಷಿ ವಿವಿಯ 7ನೇ ಸೆಮಿಷ್ಟರ್ ಬಿಎಸ್ಸಿ ವಿದ್ಯಾರ್ಥಿಗಳಿಗೆ ತರಗತಿ ಪಾಠದೊಂದಿಗೆ ಪ್ರಾಯೋಗಿಕ ಅನುಭವ ನೀಡುವ ನಿಟ್ಟಿನಲ್ಲಿ ಹಾಗೂ ಕೌಶಲ ರೂಢಿಸಿಕೊಳ್ಳಲು ಗ್ರಾಮೀಣ ಕೃಷಿ ಕಾರ‌್ಯಾನುಭವ ಕಾರ‌್ಯಕ್ರಮ ಹಮ್ಮಿಕೊಂಡಿದ್ದು, ಗ್ರಾಮಸ್ಥರ ಸಹಕಾರದಿಂದ ಶಿಬಿರ ಯಶಸ್ವಿಯಾಗಿದೆ ಎಂದರು.
ತಾಲೂಕು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸ್, ಕಂಟನಕುಂಟೆ ಗ್ರಾಪಂ ಅಧ್ಯಕ್ಷೆ ಶೋಭಾ ರಾಜಗೋಪಾಲ್, ಪಿಡಿಒ ನಂದಿನಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಜಯಚಂದ್ರ, ಉಪಾಧ್ಯಕ್ಷ ವೆಂಕಟರಾಜು, ಕಾರ‌್ಯದರ್ಶಿ ಲಕ್ಷ್ಮಮ್ಮ, ಮುಖಂಡರಾದ ಕೆ.ಎಂ. ಕೃಷ್ಣಮೂರ್ತಿ, ಸೋಮರುದ್ರ ಶರ್ಮ ಮತ್ತಿತರರು ಇದ್ದರು.