

ಚಿತ್ರದುರ್ಗ: ಪದವಿ ವಿದ್ಯಾರ್ಥಿಗಳಿಗೆ ವಿಮರ್ಶನಾ ಶಕ್ತಿ ಹೆಚ್ಚಲು ಅಸಾಧಾರಣ ಮಾರ್ಗ. ಎಲ್ಲ ರೀತಿಯಲ್ಲೂ ತೀಕ್ಷ್ಣರಾಗಲು ಪಠ್ಯಗಳು ನೆರವಾಗುತ್ತವೆ. ಹೀಗಾಗಿ ಪ್ರಬುದ್ಧತೆಯ ಸಂಕೇತ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ ಹೇಳಿದರು.
ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಐಕ್ಯುಎಸಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ, ಕನ್ನಡ ರಾಜ್ಯೋತ್ಸವ, ವಿಶೇಷ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಹಲವು ವಿಷಯಗಳ ಕುರಿತು ಪ್ರಬುದ್ಧತೆ ಪಡೆದುಕೊಳ್ಳಬೇಕು. ಸಂವಾದ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ಹಿಂದೆ ವಿದ್ಯೆಗೆ ಹೆಚ್ಚು ಮಹತ್ವವಿತ್ತು. ಆದರೀಗ ಅಸ್ತಿತ್ವದಿಂದ ವ್ಯಕ್ತಿಯನ್ನು ಗುರುತಿಸುವ ಕೆಲಸವಾಗುತ್ತಿದೆ ಎಂದು ಬೇಸರಿಸಿದರು.
ನಾಡಿನ ಪಂಡಿತರನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದ ವಿದೇಶಿಗರು ನಮ್ಮ ಸಾಹಿತ್ಯವನ್ನು ವಿಭಾಗ ಕ್ರಮವನ್ನಾಗಿ ಮಾಡಿಕೊಟ್ಟರು. ಭಾಷೆಯ ಪದಗಳು ಅವರಿಗೂ ಮೆಚ್ಚುಗೆಯಾದವು. ಇತಿಹಾಸ ಹೊಂದಿರುವ ಕನ್ನಡಕ್ಕೆ ಹೆಚ್ಚು ಮಹತ್ವವಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಏನೇ ಓದಿದರೂ ಕೀಳರಿಮೆ ಇರಬಾರದು. ಪದವಿ ಎಂಬುದು ಅರ್ಹತೆ. ಅನೇಕರು ಸರ್ಕಾರಿ ಕೆಲಸಕ್ಕೆ ಹೋಗಬೇಕೆಂದಿಲ್ಲ. ಇರುವ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಸುಂದರ ಬದುಕು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮಂಡಳಿ ಸದಸ್ಯ ಎಸ್.ಎನ್.ಚಂದ್ರಶೇಖರ್, ಪ್ರಾಚಾರ್ಯರಾದ ಡಾ.ರಘುನಾಥರೆಡ್ಡಿ, ಡಾ.ಎಲ್.ಈಶ್ವರಪ್ಪ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಉಷಾ, ಕಾರ್ಯದರ್ಶಿ ಎಲ್.ರುಚಿತಾ, ಐಕ್ಯುಎಸಿ ಸಂಚಾಲಕ ಪ್ರೊ.ಎಂ.ಎಸ್.ಪರಮೇಶ್, ಪ್ರೊ.ನಾಗರಾಜ್, ಪ್ರೊ.ಎಲ್.ರಾಜಾನಾಯ್ಕ್, ಡಾ.ಬಿ.ವೈ.ಶ್ವೇತಾ, ಮಿಸ್ಬಾಖಾನುಂ, ರಮ್ಯಾ, ಸುಜಾತಾ, ಟಿ.ಎಸ್.ಗಿರೀಶ್, ವಸಂತಕುಮಾರಿ, ಲೋಕೇಶ್, ರಾಘವೇಂದ್ರ, ಡಾ.ಸಿ.ಸುಧಾರಾಣಿ ಇತರರಿದ್ದರು.