ಪದವಿ ಪೂರ್ವ ಕಲಿಕಾ ಹೊರೆ ಕಡಿಮೆ ಮಾಡಲು ಕ್ರಮ

4
Published on

ಮೈಸೂರು: ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಪದವಿ ಪೂರ್ವ ಪರೀಕ್ಷಾ ಮಾದರಿ ಸೇರಿದಂತೆ ಕೆಲವೊಂದು ಬದಲಾವಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ನಿರ್ದೇಶಕಿ ಸಿಂಧು ಬಿ.ರೂಪೇಶ್ ತಿಳಿಸಿದರು.


ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಶತೋತ್ತರ- ಸುವರ್ಣ-ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿಯುಸಿ ಎರಡು ವರ್ಷದಲ್ಲಿ ವಿದ್ಯಾರ್ಥಿಗಳು ಅತಿಯಾದ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ಇದರೊಂದಿಗೆ ಪೈಪೋಟಿಯೂ ಅಧಿಕವಾಗಿದೆ. ಹೀಗಾಗಿ ಈ ರೀತಿಯ ಕಲಿಕಾ ಹೊರೆಯನ್ನು ಕಡಿಮೆ ಮಾಡಲು ಇಲಾಖೆ ವಿವಿಧ ಕ್ರಮಗಳಿಗೆ ಮುಂದಾಗಿದೆ. ಜತೆಗೆ, ವಿದ್ಯಾಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದರು.


ಪಿಯುಸಿಗೆ ಪ್ರಪಂಚವೇನೂ ಕೊನೆಯಾಗಲ್ಲ. ಪಿಯುಸಿ ನಂತರವೇ ವಿವಿಧ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತವೆ. ಆದ್ದರಿಂದ ಈ ಹಂತದಲ್ಲಿ ಏನು ಓದಲಾಗಿದೆ? ಅದನ್ನು ಯಾವ ರೀತಿ ಅರ್ಥೈಸಿಕೊಳ್ಳಲಾಗಿದೆ ಎಂಬುದು ಮುಖ್ಯವಾಗುತ್ತದೆ. ಕಲಿಕೆ ಅರ್ಥವಾದಾಗಲೇ ಶೈಕ್ಷಣಿಕವಾಗಿ ಮುಂದಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದರು.


ವಿದ್ಯಾರ್ಥಿ ಜೀವನದಲ್ಲಿ ಓದು ಬಹಳ ಮುಖ್ಯ. ಇದರೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸತ್ಪ್ರಜೆಯಾಗಿ ಬಾಳುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.


ನಾನು ಸಹ ಸದ್ವಿದ್ಯಾ ಶಾಲೆಯ ಹಳೇ ವಿದ್ಯಾರ್ಥಿ. 25 ವರ್ಷಗಳ ಹಿಂದೆ ಈ ಶಾಲೆಯಲ್ಲೇ ಓದಿದ್ದೆ. ಈ ಶಾಲೆಗೆ ಹೆಸರಿತ್ತು. ಆದ್ದರಿಂದ ನಾನು ಕೂಡ ಇಲ್ಲಿಗೆ ಸೇರಿಕೊಂಡಿದ್ದೆ. ಇಲ್ಲಿ ಶಿಸ್ತು ಹೆಚ್ಚು. ಅನಗತ್ಯ ವಿಷಯಗಳ ಕಡೆಗೆ ಗಮನಕೊಡುತ್ತಿರಲಿಲ್ಲ. ಬರೀ ಕಲಿಕೆ ಕಡೆಗೆ ಹೆಚ್ಚಿನ ಆಸಕ್ತಿ ಕೊಡಲಾಗುತ್ತಿತ್ತು. ಈ ರೀತಿ ಶಿಸ್ತನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಯಿತು ಎಂದು ಹಳೇ ದಿನಗಳನ್ನು ಮೆಲುಕು ಹಾಕಿದರು.


ಎನ್.ಆರ್. ಸಮೂಹ ಸಂಸ್ಥೆಯ ಛೇರ‌್ಮನ್ ಆರ್.ಗುರು ಮಾತನಾಡಿ, ನಾನು ಸಹ ಸದ್ವಿದ್ಯಾ ಶಾಲೆ ವಿದ್ಯಾರ್ಥಿ. 70 ವರ್ಷಗಳ ಹಿಂದೆ ಸದ್ವಿದ್ಯಾ ಶಾಲೆಯಲ್ಲಿ 3ರಿಂದ 7 ತರಗತಿವರೆಗೆ ಮಾತ್ರ ಇತ್ತು. ಈಗಿನಂತೆ ಡೆಸ್ಕ್ ಸೇರಿದಂತೆ ಇನ್ನಿತರ ಸೌಲಭ್ಯಗಳು ಇರಲಿಲ್ಲ. ಬೆಂಚ್ ಮಾತ್ರ ಇತ್ತು. ಆವರಣದಲ್ಲಿ ಫುಟ್ಬಾಲ್ ಆಡುತ್ತಿದ್ದವು. ಇಂತಹ ಅನೇಕ ಸವಿನೆನಪುಗಳು ಇನ್ನೂ ನೆನಪಿನಲ್ಲಿ ಉಳಿದಿವೆ ಎಂದು ಸ್ಮರಿಸಿದರು.


7 ದಶಕದ ಹಿಂದೆಯೂ ಸದ್ವಿದ್ಯಾ ಪ್ರತಿಷ್ಠಿತ ಶಾಲೆಯಾಗಿತ್ತು. ಈಗಲೂ ಅದೇ ಸ್ಥಿತಿಯಲ್ಲಿ ಇದೆ. ಇದರೊಂದಿಗೆ ಬನುಮಯ್ಯ, ಮರಿಮಲ್ಲಪ್ಪ, ದಳವಾಯಿ ಶಾಲೆಗಳು ಇದ್ದವು ಎಂದು ಸ್ಮರಿಸಿಕೊಂಡರು.


ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಎಂ.ಎಸ್.ಕೆ.ನರಹರಿಬಾಬು ಮಾತನಾಡಿ,

ಶಿಕ್ಷಣ ವಿಕಾಸಶೀಲವಾಗಿಬೇಕು. ಬರೀ ಮಾಹಿತಿ, ವಿದ್ಯೆಯೇ ಕಲಿಕೆಯಲ್ಲ. ಇದರೊಂದಿಗೆ ವೈಚಾರಿಕತೆ, ಸೃಜನಶೀಲತೆ ಬಿತ್ತುವುದು ಶಿಕ್ಷಣವಾಗಿದೆ ಎಂದರು.
‘ಸುರದ್ರುಮ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಂಸ್ಥೆ ಅಧ್ಯಕ್ಷ ಪ್ರೊ.ವಿ.ಕೆ.ಗೋಪಾಲಾಚಾರ್, ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಸಹ ಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ, ಆಡಳಿತ ಮಂಡಳಿಯ ನಿರ್ದೇಶಕರಾದ ಎಂ.ಡಿ.ಗೋಪಿನಾಥ್, ಡಾ.ನಳನಿ ಚಂದರ್, ಆರ್.ಎಸ್.ಪ್ರಸನ್ನ, ಡಾ.ಎಸ್.ಆರ್.ಭಾಗ್ಯಶ್ರೀ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net