ಪದವಿ ಜತೆಗೆ ಇತರೆ ಕೌಶಲಗಳನ್ನು ಬೆಳೆಸಿಕೊಳ್ಳಿ:ಡಿ.ಕೆ. ಮಂಜಯ್ಯ ಸಲಹೆ

ಪದವಿ ಜತೆಗೆ ಇತರೆ ಕೌಶಲಗಳನ್ನು ಬೆಳೆಸಿಕೊಳ್ಳಿ:ಡಿ.ಕೆ. ಮಂಜಯ್ಯ ಸಲಹೆ
Published on

ಹಾಸನ: ಪ್ರೀತಿ, ಸಂತೋಷ ಬಂಧ-ಅನುಬಂಧಗಳೆಲ್ಲವನ್ನೂ ನಾವು ಸಾಂಸ್ಕೃತಿಕ ಸಮಾರಂಭದಲ್ಲಿ ಕಾಣಬಹುದು ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಹೇಳಿದರು.
ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಣ್ಣ-ಸಣ್ಣ ಆಸೆಗಳಿಗೋಸ್ಕರ ದೊಡ್ಡ ದೊಡ್ಡ ಅವಕಾಶಗಳನ್ನು ಕಳೆದುಕೊಳ್ಳಬಾರದು. ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂಬ ಕನಸನ್ನು ಹೊತ್ತು ಪದವಿ ಶಿಕ್ಷಣಕ್ಕೆ ಸೇರಿದ್ದೀರಿ. ಈ ಪದವಿಯ ಜತೆಗೆ ಇತರೆ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಾಗರಿಕತೆ ಎನ್ನುವುದು ಹರಪ್ಪ ಮಹೆಂಜದಾರೋ ಮತ್ತು ಈಜಿಪ್ಟ್ ಕಾಲದಿಂದಲೂ ಬೆಳೆದುಕೊಂಡು ಬಂದಿದೆ. ವಿದೇಶದವರು ಭಾರತೀಯ ಸಂಸ್ಕೃತಿಯತ್ತ ಮುಖ ಮಾಡುವ ಇತ್ತೀಚಿನ ಕಾಲಘಟ್ಟದಲ್ಲಿ ಭಾರತದ ಯುವ ಸಮುದಾಯ ಭಾರತೀಯ ಸಂಪ್ರದಾಯವನ್ನು ಕಳೆದುಕೊಳ್ಳುತ್ತಾ ವಿದೇಶಿ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಕೃತಿ ಮತ್ತು ಹಬ್ಬಗಳ ಆಚರಣೆಗಳು ನಮ್ಮಲ್ಲಿರುವ ಕೆಡಕುಗಳನ್ನು ದೂರ ಮಾಡುತ್ತಾ ಸಂಬಂಧಗಳನ್ನು ಬೆಸೆಯುತ್ತವೆ. ಇರುವವರೆಗೆ ಎಲ್ಲರೊಟ್ಟಿಗೆ ಕೂಡಿ ಬಾಳಿದರೆ ಮಾತ್ರ ಸದೃಢ ಸಮಾಜವಾಗಿರುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡೋಣ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಕಾನೂನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶೀನಾ ಥಾಮಸ್, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎನ್. ಮಹದೇವಪ್ಪ, ಸಹ ಪ್ರಧ್ಯಾಪಕ ಡಾ. ಗಣೇಶ್ ಹೆಗ್ಗಡೆ, ಡಾ. ಕೆ.ಎನ್.ಅನಿತಾ, ಡಾ. ಭಾರತಿ ಜಿ ಗಣವಾರಿ, ಸಹಾಯಕ ಪ್ರಾಧ್ಯಾಪಕ ಎಸ್.ವಿ.ಲೇಪಾಕ್ಷಯ್ಯ ಎಸ್.ವಿ, ಡಾ. ಶಿವಣ್ಣ ನಾಯ್ಕ, ಗ್ರಂಥಪಾಲಕ ವಿ. ಪಾಪಣ್ಣ ವಿ, ಮಂಜೇಗೌಡ, ಕಚೇರಿ ಅಧೀಕ್ಷಕ ಎಚ್.ಜಿ. ಮಂಜುನಾಥ್, ಆರ್. ಸುಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net