ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಪ್ರತಿಭಟನೆ

mysore
Published on

ಮೈಸೂರು: ಹತ್ತಾರು ವರ್ಷಗಳಿಂದ ನಿರಂತರವಾಗಿ ಕಾಲೇಜು ಶಿಕ್ಷಣ ಇಲಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವಾ ಹಿರಿತನ ಆಧಾರದಲ್ಲಿ ನೇಮಕಾತಿಗೆ ಪರಿಗಣಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ 2025-26ನೇ ಸಾಲಿನ ಬಿಕ್ಕಟ್ಟನ್ನು ಸರ್ಕಾರದ ಹಂತದಲ್ಲೇ ಪರಿಹರಿಸಬೇಕು.

ಜತೆಗೆ, ಯುಜಿಸಿ, ನಾನ್-ಯುಜಿಸಿ ಎಂಬ ತಾರತಮ್ಯ ಮಾಡದೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ 18 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 5,623 ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದವರು.

ಈ ಅರ್ಹತೆ ವ್ಯಾಪ್ತಿಯಿಂದ ಹೊರಗೆ ಇರುವ ನಾನ್ ಯುಜಿಸಿಗಳ ಸಂಖ್ಯೆ 5,353 ಅತಿಥಿ ಉಪನ್ಯಾಸಕರಾಗಿದ್ದಾರೆ. ಸಾವಿರಾರು ಅತಿಥಿ ಉಪನ್ಯಾಸಕರು ಎಂ.ಫಿಲ್ ಪದವಿ ಪಡೆದಿದ್ದಾರೆ. ಇವರೆಲ್ಲರೂ ಹತ್ತಾರೂ ವರ್ಷಗಳ ಕಾಲ ಬೋಧನಾ ಅನುಭವ, ಬೋಧನಾ ಕೌಶಲ ಹೊಂದಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಯುಜಿಸಿ ಅರ್ಹತೆ ಪಡೆದಿಲ್ಲ ಎಂಬ ಕಾರಣದಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.

ಈ ವರೆಗೂ ಯುಜಿಸಿ ನಿಯಮಾವಳಿಗಳಲ್ಲಿ ಸೂಚಿಸಿರುವಂತೆ ಕಾಯಂ ಅಧ್ಯಾಪಕರಿಗೆ ನೀಡಿರುವ ಯಾವುದೇ ರಿತೀಯ ಸವಲತ್ತು ಪಡೆಯದೆ ತಾತ್ಕಾಲಿಕ ನೌಕರರಾಗಿಯೇ, ಕನಿಷ್ಠ ಗೌರವಧನ ಪಡೆದು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಸಲ್ಲಿಸುತ್ತಿದ್ದರೂ ಸೂಕ್ತ ಸೌಲಭ್ಯ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ರಾಜ್ಯದ ಶೇ.70ರಷ್ಟು ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಸೇವೆಯನ್ನೇ ಅವಲಂಭಿಸಿವೆ. ಕಳೆದ ಒಂದು ತಿಂಗಳಿಂದ ಸರಿಯಾಗಿ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿಲ್ಲ. ಜತೆಗೆ, ಇದೇ ವೃತ್ತಿಯನ್ನು ನಂಬಿ ದಶಕಗಳಿಂದ ಪಾಠ ಪ್ರವಚನ ಮಾಡುತ್ತಾ ಬಂದಿರುವ ಅತಿಥಿ ಉಪನ್ಯಾಸಕರ ಬದುಕು ಈಗ ಆತಂತ್ರವಾಗಿದೆ. ಕಳೆದ ಒಂದುವರೆ ತಿಂಗಳಿಂದ ಗೌರವಧನವೂ ಇಲ್ಲದೆ ನಮ್ಮಗಳ ಬದುಕು, ಕುಟುಂಬಗಳ ಸ್ಥಿತಿ ಹೇಳತೀರದಾಗಿದೆ ಎಂದು ಅಳಲು ತೊಡಿಕೊಂಡರು

ದಶಕಗಳಿಂದ ನಮ್ಮಿಂದ ತಾತ್ಕಾಲಿಕ ಸೇವೆ ಪಡೆದ ಸರ್ಕಾರ ಮತ್ತು ಇಲಾಖೆ ನಮ್ಮನ್ನು ತಾತ್ಕಾಲಿಕ ಸೇವೆಯಲ್ಲಿ ಉಳಿಸಿಕೊಳ್ಳಬೇಕು.

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ ಮತ್ತು ನಾನ್-ಯುಜಿಸಿ ಎಂಬ ತಾರತಮ್ಯ ಮಾಡದೆ ಸರ್ಕಾರದ ಹಂತದಲ್ಲೇ ಮಾನವೀಯ ದೃಷ್ಟಿಯಿಂದ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಡಾ.ಸೋಮಶೇಖರ್ ಎಚ್.ಶಿಮೊಗ್ಗಿ, ರಾಜೇಶ್‌ಕುಮಾರ್, ನಾಗರಾಜು, ರವೀಂದ್ರ, ಶಾಮಲಾ, ದೀಪಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net