

ರಿಪ್ಪನ್‌ಪೇಟೆ: ರಂಗಭೂಮಿಯಲ್ಲಿ ಮನೋಜ್ಞ ನಟನೆ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಈಗ ‘ಆರುಣ್ಯ’ ಎಂಬ ಕಿರುಚಿತ್ರ ನಿರ್ಮಿಸಿ ಗಮನ ಸೆಳೆದಿದ್ದಾರೆ. ಸ್ಪೀಕಿಂಗ್ ಏಂಜಲ್ಸ್ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿ ಪ್ರತಿಭೆಯನ್ನು ರುಜುವಾತು ಪಡಿಸಲು ಅಣಿಯಾಗಿದ್ದಾರೆ.
ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ಅಭಿನಯಿಸಿರುವ ಕಿರುಚಿತ್ರದ ಟ್ರೇಲರ್ ಸೋಮವಾರ ಕಾಲೇಜು ಸಭಾಂಗಣದಲ್ಲಿ ಬಿಡುಗಡೆಗೊಂಡಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ತನು ಕುಲಕರ್ಣಿ, ರಶ್ಮಿ ಬೇಲೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಕಿರುಚಿತ್ರದಲ್ಲಿ ಸುಮಾರು 11 ಜನ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ಸುಂದರ ನಿಸರ್ಗದಲ್ಲಿರುವ ಅರಸಾಳು ಗ್ರಾಪಂನ ಕೊಳವಂಕ ಗ್ರಾಮದಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಗ್ರಾಮೀಣ ಸೊಗಡಿನಲ್ಲಿ ಮೂಡಿಬಂದಿರುವ ಚಿತ್ರ ಇದಾಗಿದೆ. ಓದಿ ಅತ್ಯುನ್ನತ ಸ್ಥಾನಕ್ಕೇರುವ ಆಕಾಂಕ್ಷೆ ಹೊಂದಿದ್ದ ಬಡಕುಟುಂಬದ ವಿದ್ಯಾರ್ಥಿನಿಯ ಕಥಾಹಂದರವನ್ನು ಕಿರುಚಿತ್ರ ಹೊಂದಿದೆ. ಎಲ್ಲ ಪಾತ್ರಗಳಿಗೂ ವಿದ್ಯಾರ್ಥಿಗಳು ಜೀವತುಂಬಿದ್ದಾರೆ. ಪ್ರದೀಪ್ ಆಚಾರ್ಯ ಚಿತ್ರ ನಿರ್ಮಾಣ, ನಿರಂಜನ್ ಛಾಯಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದು, ವರುಣ್ ವಶಿಷ್ಠ ಸಂಕಲನ ಮಾಡಿದ್ದಾರೆ. ಚಿತ್ರಕಥೆ, ಪರಿಕಲ್ಪನೆ, ಮಾರ್ಗದರ್ಶನ ಸಹಪ್ರಾಧ್ಯಾಪಕ ನರೇಂದ್ರ ಕುಳಗಟ್ಟಿ ನಿರ್ವಹಿಸಿದ್ದಾರೆ. ವಿದ್ಯಾ ಆಚಾರ್ಯ, ಪಿ.ಟಿ.ಸ್ಪಂದನಾ, ಯು.ತೇಜಶ್ರೀ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಗಾಯನ ಎಸ್.ಆರ್.ಸಂಗೀತಾ, ವಸ್ತ್ರವಿನ್ಯಾಸ ರಚನಾ ಭಟ್, ವಿದ್ಯಾ, ನಿರ್ಮಾಣ ಸಹಾಯಕರಾಗಿ ಯತೀಶ, ಅಭಿಷೇಕ್ ನಿರ್ವಹಿಸಿದ್ದಾರೆ.
ಚಿತ್ರದ ಹೆಸರು ಆರುಣ್ಯ ಶಿರೋನಾಮೆಯಂತೆ ಕಾಲೇಜಿನ ವಿದ್ಯಾರ್ಥಿಗಳು ಭರವಸೆಯ ಮೊದಲ ಕಿರಣಗಳಾಗಲಿ. ಕಾಲೇಜಿನಲ್ಲಿ ಕಿರುಚಿತ್ರ ನಿರ್ಮಾಣದ ಹೊಸ ಪ್ರಯತ್ನವನ್ನು ಸಹಪ್ರಾಧ್ಯಾಪಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಯಶಸ್ಸು ಲಭಿಸಲ ಎಂದು ಪ್ರಚಾರ್ಯ ಚಂದ್ರಶೇಖರ್ ಆಶಿಸಿದ್ದಾರೆ.
ರಶ್ಮಿ ಬೇಲೂರು ಮಾತನಾಡಿ, ಸಮಾಜ ಮತ್ತು ಸಾಮಾಜಿಕ ಜಾಲತಾಣ ಎರಡರಲ್ಲಿಯೂ ತೊಡಗಿರುವ ಇಲ್ಲಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಆತ್ಮಸ್ಥೈರ್ಯದಿಂದ ಮುನ್ನುಗ್ಗಿ ಗುರಿ ತಲುಪಬೇಕು ಎಂದು ತಿಳಿಸಿದರು.