‘ಪದ ಸಂಪತ್ತು’ ಗೆದ್ದ ವಿದ್ಯಾರ್ಥಿಗಳು

19Rajesh3
Published on

ಚಾಮರಾಜನಗರ: ಕನ್ನಡ ಭಾಷೆ, ಶಬ್ಧ ಸಂಪತ್ತು ಮತ್ತು ಪದಗಳ ಬಳಕೆಯ ವೈವಿಧ್ಯತೆಗಳ ಪ್ರದರ್ಶನವಾಯಿತು. ವಿದ್ಯಾರ್ಥಿ ವೃಂದದ ಬುದ್ಧಿಶಕ್ತಿ ಚುರುಕಾಗಲು, ಶಬ್ಧ ಭಂಡಾರ ವೃದ್ಧಿಸಿಕೊಳ್ಳಲು ವೇದಿಕೆಯಾಯಿತು. ಭಾಷೆ ಬಗ್ಗೆ ಇನ್ನಷ್ಟು ಆಪ್ತತೆ ಮೂಡಿತು. ಓದು ಮತ್ತು ಬರವಣಿಗೆಯ ಮೇಲಿನ ಆಸಕ್ತಿಯನ್ನು ಹೆಚ್ಚಿಸಲು ಪ್ರೋತ್ಸಾಹ ನೀಡಿತು.

ಇದು ಸ್ವಾತಂತ್ರ್ಯೋತ್ಸವದ ನಿಮಿತ್ತ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಸೋಮವಾರ ಮತ್ತು ಮಂಗಳವಾರ ಆಯೋಜಿಸಿದ್ದ ಪದಬಂಧ ಸ್ಪರ್ಧೆಯ ಔಚಿತ್ಯದ ಚಿತ್ರಣ.

ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು. 1 ತಾಸು ನಡೆದ ಪದಬಂಧ ಸ್ಪರ್ಧೆ ಕನ್ನಡ ಪದಗಳಿಗೆ ಪರ್ಯಾಯ ಶಬ್ಧಗಳನ್ನು ಅರಿಯಲು, ಸರಿಯಾದ ಪದಗಳನ್ನು ಬಳಸಲು ಅನುವು ಮಾಡಿಕೊಟ್ಟಿತು. ಆಂಗ್ಲಭಾಷೆಯ ಪ್ರಭಾವ, ಮೊಬೈಲ್ ಕಾಲದಲ್ಲೂ ಪದಬಂಧ ಸ್ಪರ್ಧೆ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆದು, ಪ್ರಶ್ನೆಗಳಿಗೆ ಉತ್ಸಾಹದಿಂದ ಉತ್ತರ ಬರೆಯುವಂತೆ ಮಾಡಿತು. ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೇ ಪ್ರಾಧ್ಯಾಪಕರೂ ಸಹ ಪದಬಂಧ ತುಂಬಿದ್ದು ವಿಶೇಷವಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ಎ.ಎಂ.ಶಿವಸ್ವಾಮಿ ಮೌಲ್ಯಮಾಪನ ಮಾಡಿ ವಿಜೇತರ ಪಟ್ಟಿ ತಯಾರಿಸಿದರು. ಕಾಲೇಜಿನಲ್ಲಿ ಮಂಗಳವಾರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಕಷ್ಟ ಪಟ್ಟು ಓದಿ, ಸುಖವಾಗಿ ಬಾಳಿ:

ಪದವಿ ವ್ಯಾಸಂಗದ ಮೂರು ವರ್ಷ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದರೆ ನೂರು ವರ್ಷ ಸುಖವಾಗಿ ಬಾಳಬಹುದು ಎಂದು ಜಿಲ್ಲಾಡಳಿತ ಭವನದ ಹೊರಗುತ್ತಿಗೆ ನೌಕರ ಹಿರೇಬೇಗೂರು ಮಹೇಶ್ ಕಿವಿಮಾತು ಹೇಳಿದರು.

ಪದಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು. ನನ್ನನ್ನು ಅಂಗವಿಕಲತೆ ಮತ್ತು ಬಡತನ ತುಂಬಾ ಕಾಡಿತ್ತು. ಓದು ಮತ್ತು ಉದ್ಯೋಗದಿಂದ ಮಾತ್ರ ಹಂತ ಹಂತವಾಗಿ ಯಶಸ್ಸು ಕಾಣುತ್ತಿದ್ದೇನೆ. ಇದಕ್ಕೆ ನನ್ನ ಪತ್ನಿ ಬೆನ್ನೆಲುಬಾಗಿ ನಿಂತಿದ್ದಾಳೆ. ವಿದ್ಯಾರ್ಥಿಗಳು ವ್ಯಾಸಂಗದ ಕಾಲದಲ್ಲಿ ಕಷ್ಟಪಡಬೇಕು. ಪದವಿ ಓದುವಾಗ ಶೈಕ್ಷಣಿಕ ಸಾಧನೆ ಮಾಡಿದರೆ ಭವಿಷ್ಯದಲ್ಲಿ ಚೆನ್ನಾಗಿ ಬದುಕಬಹುದು. ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಯಾರಾದರೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಾಯದ ಅಗತ್ಯವಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಆರ್.ಎಸ್.ಅಶ್ವಿನಿ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಜ್ಞಾನ ವಿದ್ಯಾರ್ಥಿಗಳ ಸ್ವತ್ತು. ಪದಬಂಧ ತುಂಬುವುದರಿಂದ ಅಸಾಧಾರಣ ಜ್ಞಾನ, ಹೊಸ ಪದಗಳ ಪರಿಚಯ, ಸರಳ ಪದ ಮತ್ತು ಕ್ಲಿಷ್ಟಕರ ಪದಗಳು, ಬುದ್ಧಿ ಚುರುಕು, ಭಾಷೆ ಅಭಿವೃದ್ಧಿ ಮತ್ತು ಕಲಿಕೆಯಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿಯರಾದ ಪಲ್ಲವಿ ಇಳಕಲ್, ಡಾ.ಶಾಲಿನಿ, ಗ್ರಂಥಪಾಲಕಿ ಜಿ.ಕೆ.ದೀಪಿತಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಗೆಲುವಿಗೆ ಪ್ರೇರಣೆಯೇ ‘ಸೋಲು’:

ಕಷ್ಟದಲ್ಲಿರುವವರೇ ಬೆಳೆಯುವುದು, ಸೋಲುಗಳೇ ಗೆಲುವಿಗೆ ಪ್ರೇರಣೆಯಾಗುವುದು ಎಂದು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ಶಿವಸ್ವಾಮಿ ಹೇಳಿದರು. ವಿಜಯವಾಣಿ ಪತ್ರಿಕೆಯ ಪದಬಂಧ ಸ್ಪರ್ಧೆ ಕ್ರಿಯಾತ್ಮಕ ಮುನ್ನಡೆಯಾಗಿದೆ. ಸ್ಪರ್ಧೆಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ತೊರೆಯಿತು. ಬಹುಮಾನ ವಂಚಿತರಾದ ವಿದ್ಯಾರ್ಥಿಗಳ ಸೋಲು ಮುಂದಿನ ಗೆಲುವಿಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು. ಪದಬಂಧ ತುಂಬುವಲ್ಲಿ ಬುದ್ಧಿವಂತಿಕೆಯೊಂದಿಗೆ ದುಂಡಾದ ಬರವಣಿಗೆಯೂ ಮುಖ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಸ್ಪರ್ಧೆಯಲ್ಲಿ ಗೆದ್ದವರು: ಪದಬಂಧ ಸ್ಪರ್ಧೆಯಲ್ಲಿ ಬಿಎಸ್ಸಿ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದರು. ಬಿಎಸ್ಸಿ ಮೊದಲ ವರ್ಷದ ವಿದ್ಯಾರ್ಥಿನಿ ಅಮೂಲ್ಯ(ಪ್ರಥಮ), ದ್ವಿತೀಯ ವರ್ಷದ ಡಿ.ಎಸ್.ನವೀನ್(ದ್ವಿತೀಯ), ಪ್ರಥಮ ವರ್ಷದ ಹಾಫೀಜಾ ಜೀಶಾನ್ (ತೃತೀಯ) ಹಿರೇಬೇಗೂರು ಮಹೇಶ್ ಅವರಿಂದ ನಗದು ಬಹುಮಾನ ಪಡೆದುಕೊಂಡರು. ಸ್ಪರ್ಧೆಯಲ್ಲಿ ಉತ್ತಮ ಅಂಕ ಗಳಿಸಿದ್ದ ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿ ಬದನಗುಪ್ಪೆ ಎಸ್.ನಿಂಗರಾಜು, ಮಹದೇವಸ್ವಾಮಿ, ಎಂ.ಲಾವಣ್ಯ, ಪ್ರಥಮ ವರ್ಷದ ಟಿ.ಎಸ್.ಪ್ರವೀಣ್, ಎಚ್.ಎಂ.ಜೀವನ್, ಸುಹಾಸ್‌ರಾಜ್‌ಗೆ ಪ್ರೊ.ಶಿವಸ್ವಾಮಿ ಪ್ರೋತ್ಸಾಹ ಪೂರ್ವಕವಾಗಿ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಬೆನ್ನುತಟ್ಟಿದರು.

ನಾನು ಪ್ರತಿದಿನ ಪತ್ರಿಕೆ ಓದುತ್ತೇನೆ. ಪತ್ರಿಕೆಗಳನ್ನು ಓದುವುದರಿಂದ ದೈನಂದಿಕ ವಿದ್ಯಾಮಾನಗಳು ತಿಳಿಯುವುದು ಮಾತ್ರವಲ್ಲದೆ, ಪದ ಸಂಪತ್ತೂ ವೃದ್ಧಿಯಾಗುತ್ತದೆ. ಹೊಸ ಪದಗಳ ಪರಿಚಯವಾಗುತ್ತವೆ. ಪದಬಂಧ ಸ್ಪರ್ಧೆಯಲ್ಲಿ ಪದಗಳನ್ನು ತುಂಬುವಾಗ ಪತ್ರಿಕೆ ಓದು ಸಹಕಾರಿಯಾಯಿತು. ಅಮೂಲ್ಯ, ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ನನಗೆ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸವಿದೆ. ಪದಬಂಧ ಸ್ಪರ್ಧೆಯಲ್ಲಿ ಇದು ನೆರವಾಯಿತು. ಓದುವ ಹವ್ಯಾಸ ರೂಢಿಸಿಕೊಂಡರೆ ಪದಗಳಿಗೆ ಸಮನಾರ್ಥಕ ಪದ ಬಳಕೆಯನ್ನು ಸುಲಭವಾಗಿ ಮಾಡಬಹುದು ಎಂಬುದನ್ನು ಪದಬಂಧ ಸ್ಪರ್ಧೆ ತಿಳಿಸಿಕೊಟ್ಟಿದೆ. ಡಿ.ಎಸ್.ನವೀನ್, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ಪದಬಂಧ ಸ್ಪರ್ಧೆ ವಿನೂತನವಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಕ್ಕೆ ತುಂಬಾ ಖುಷಿಯಾಯಿತು. ಬಹುಮಾನ ಗಳಿಸಿದ್ದೂ ಸಂತಸ ತಂದಿದೆ. ಪದಬಂಧ ತುಂಬುವಾಗ ನಮಗೆ ಪದಗಳ ಕುರಿತಾಗಿ ಇರುವ ಜ್ಞಾನವೆಷ್ಟು ಎನ್ನುವುದು ಗೊತ್ತಾಗುತ್ತದೆ. ಇನ್ನೂ ಹೆಚ್ಚಿನ ಕಲಿಕೆಗೆ ಪ್ರೇರಣೆಯಾಗಿದೆ. ಹಾಫೀಜಾ ಜೀಶಾನ್, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net