

ಬಸವಕಲ್ಯಾಣ: ಪತ್ರಿಕೋದ್ಯಮಕ್ಕೆ ಸಾಹಿತ್ಯ ಸಂಸ್ಪರ್ಶ ಅವಶ್ಯ ಎಂದು ತುಮಕೂರು ವಿವಿಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ ಟ್ರಸ್ಟ್, ಶ್ರೀ ಮದ್ವೀರಶೈವ ಸದ್ಬೋಧನ ಸಂಸ್ಥೆ ಹಾಗೂ ಅಭಿನವ ಶ್ರೀ ಪ್ರಕಾಶನ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಗುರುವಾರ ಸಂಜೆ ಆಯೋಜಿಸಿದ್ದ ಸಿದ್ಧಾತ ಶಿಖಾಮಣಿ, ವಚನ ಸಾಹಿತ್ಯ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ `ಸುರಗಿರಿ' ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಾಹಿತ್ಯ, ಪತ್ರಿಕೋದ್ಯಮದ ಜತೆಗೆ ಚಳುವಳಿ ಸೇರಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ.ನಾಗರಾಜ ಅವರ ಬರಹಗಳು ಮತ್ತು ವೈಚಾರಿಕ ಲೇಖನಗಳ ಸಂಕಲನ ಮಾನವೀಯತೆ ಮತ್ತು ಸಮಕಾಲಿನ ವಾಸ್ತವ ಬಿಂಬಿಸುತ್ತದೆ. ಪುಸ್ತಕ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿ ಎಂದು ಹೇಳಿದರು.
ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ವೈಚಾರಿಕತೆ, ನಾಗರಿಕತೆ, ಆಧುನಿಕತೆ ನಾಗಲೋಟದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮರೆಯಾಗಬಾರದು. ಸಾಹಿತ್ಯ ಸಂಸ್ಕೃತಿ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕು. ಗವಿಮಠದ ಕುರಿತು ಸಾಹಿತಿ ವೀರಶೆಟ್ಟಿ ಪಾಟೀಲ್ ಮೂರು ಪುಸ್ತಕ ಬರೆದಿದ್ದು, ಮಠದಿಂದ ಪ್ರಕಟಿಸಲಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾತನಾಡಿ, ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಸಾಹಿತ್ಯಕ್ಕಿದೆ. ಜನಪರ ಸಮಾಜಮುಖಿ ಸಾಹಿತ್ಯ ಗಟ್ಟಿಯಾಗಿ ನಿಲ್ಲುತ್ತದೆ. ಯುವ ಸಮೂಹ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ ಮಾತನಾಡಿ, ಪರಿಷತ್‌ನಿಂದ ಪ್ರೌಢ ಶಾಲೆಯಲ್ಲಿ ಸಾಹಿತ್ಯದ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ವಿ.ಬಿ.ಹಿರೇಗೌಡರ್ ಮಾತನಾಡಿ, ಮೊಬೈಲ್ ಬಳಕೆ ಕಡಿಮೆಯಾಗಿ ಸಾಹಿತ್ಯ ಓದುವ ಹವ್ಯಾಸ ರೂಢಿಸಿಕೊಳ್ಳಬೇಕಿದೆ ಎಂದರು.
ಶ್ರೀ ಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಅಧ್ಯಕ್ಷ ಬಸವಂತಪ್ಪ ಲವಾರೆ, ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ವೀರಶೆಟ್ಟಿ ಪಾಟೀಲ್, ಪ್ರೊ. ಶಂಕರ ಕರುಣೆ, ಪ್ರೊ.ರುದ್ರೇಶ್ವರ ಸ್ವಾಮಿ ಗೋರ್ಟಾ, ನಾಗಪ್ಪ ನಿಣ್ಣೆ, ಧನರಾಜ ರಾಜೋಳೆ, ಸೂರ್ಯಕಾಂತ ಪಾಟೀಲ್, ನಾಗೇಂದ್ರ ಬಿರಾದಾರ, ಎ.ಜಿ.ಪಾಟೀಲ್, ಸವಿತಾ ಸ್ವಾಮಿ, ಗೋವಿಂದರೆಡ್ಡಿ ಇತರರಿದ್ದರು.
ಶರಣಬಸಪ್ಪ ಅಲಗೂಡೆ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಅಲಗೂಡೆ ಸ್ವಾಗತಿಸಿದರು. ನಿತೀನ್ ನೀಲಕಂಠೆ ವಂದಿಸಿದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು.