ಪತ್ರಿಕೋದ್ಯಮ ಮತ್ತು ಛಾಯಚಿತ್ರಕ್ಕೆ ಅವಿನಾಭಾವ ಸಂಬಂಧ : ಎಸ್.ಎ. ಮುರುಳಿಧರ್ ಅಭಿಮತ

photo-1611842642932-fbec0d723eb2
Published on



ಕೊಡಗು : ಯಾವುದೇ ಒಂದು ಒಳ್ಳೆಯ ಹವ್ಯಾಸವನ್ನು ಪ್ರೀತಿಯಿಂದ ಅಧ್ಯಯನ ಮಾಡಿದರೆ ಅದು ಜೀವ ಪೂರ್ತಿ ಮರೆಯಲು ಸಾಧ್ಯವಾಗುವುದಿಲ್ಲ. ಅದು ನಮಗೆ ನೀಡುವ ಜ್ಞಾನ ಮತ್ತು ಶಾಂತಿ, ಸಮಾಧಾನಗಳು ವರ್ಣನೆಗೆ ನಿಲುಕದ್ದು ಎಂದು ಖ್ಯಾತ ಪಕ್ಷಿ ತಜ್ಞ ಡಾ.ಎಸ್.ವಿ. ನರಸಿಂಹನ್ ಹೇಳಿದರು.


ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಶುಕ್ರವಾರ ಮಾದಾಪುರದ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಛಾಯಾಗ್ರಹಣ ದಿನವನ್ನು ಉದ್ಘಾಟಿಸಿ ಮಾತನಾಡಿದರು.


ಕ್ಯಾಮೆರಾ ಮುಂದೆ ಗಂಟೆಗಟ್ಟಲೆ ಕೂರುವುದು ಕೂಡ ಒಂದು ಹವ್ಯಾಸದಂತಾಗಿ ಹತ್ತು ಫೋಟೋಗಳಿಗೆ ಒಂದು ಫೋಟೋ ಚೆನ್ನಾಗಿ ಬಂದರೂ ಕೂಡ ಅದನ್ನು ಸಂಭ್ರಮಿಸುವವರು ನಮ್ಮ ನಡುವೆ ಇದ್ದು, ಅಂತಹವರಲ್ಲಿ ನಾನು ಕೂಡ ಒಬ್ಬ ಎಂದರು.


ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ ಪತ್ರಿಕೋದ್ಯಮ ಹಾಗೂ ಛಾಯಾಚಿತ್ರಕ್ಕೆ ಅವಿನಾಭಾವ ಸಂಬಂಧ ಇದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಭಾವನೆ ಮತ್ತು ಸೂಕ್ಷ್ಮತೆ ಅರ್ಥ ಮಾಡಿಕೊಂಡು ಚಿತ್ರಗಳನ್ನು ತೆಗೆಯುವಂತೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಮಂದಪ್ಪ ಮಾತನಾಡಿ ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ ಪ್ರಕೃತಿಯನ್ನು ವೀಕ್ಷಣೆ ಮಾಡುವುದು ಪಶು, ಪಕ್ಷಿ, ಪ್ರಾಣಿಗಳ ಬಗ್ಗೆ ತಿಳಿಯುವುದು ಒಂದು ಅಸಾಧಾರಣ ಹವ್ಯಾಸ ಮತ್ತು ವಿಜ್ಞಾನ ಕೂಡ ಆಗಿದೆ. ಪ್ರತಿಯೊಬ್ಬರು ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯೋಗ್ಯ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬೇಕೆಂದರು.


ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ಎಂ.ಬಿ. ವಿನ್ಸೆಂಟ್, ಗುಡ್ಡೆಮನೆ ವಿಶು ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರ ಅನಿಲ್ ಎಚ್.ಟಿ., ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇವತಿ, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಿ.ಸಿ. ದಿನೇಶ್, ಸಂಘದ ತಾಲೂಕು ಹಾಗೂ ಜಿಲ್ಲೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗದಲ್ಲಿ ಆಯೋಜಿಸಲಾಗಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ 105 ಚಿತ್ರಗಳ ಬಗ್ಗೆ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ವಿವರಣೆ ನೀಡಿದರು. ಪ್ರೌಢಶಾಲಾ ವಿಭಾಗದಲ್ಲಿ ಹರ್ಷಿತಾ ಪ್ರಥಮ, ಯಕ್ಷಿತಾ ದ್ವಿತೀಯ, ತೃಷಾ ತೃತೀಯ, ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಬಿ.ಪಿ. ಪುನಿತ್ ಪ್ರಥಮ, ತಶ್ರೀಫ್ ದ್ವಿತೀಯ, ಋಷಿಕೇಶ್ ಎಂ.ಆರ್. ತೃತಿಯ ಬಹುಮಾನ ಪಡೆದರು. ಬಿ.ಎಸ್. ಪುನೀತ್, ಸರಿತಾ, ಲಿಶ್ವಿನ್, ಕೀರ್ತನಾ, ಇಂದುಶ್ರೀ, ಮೋಹನ್ ಸಮಾಧಾನಕರ ಬಹುಮಾನ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net