

ಚಿತ್ರದುರ್ಗ: ಬಡ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ ಅವರಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಅವಕಾಶ ಸಿಗಬೇಕಿದೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಎಸ್‌ಜೆಎಂ ಪಾಲಿಟೆಕ್ನಿಕ್‌ನಲ್ಲಿ ಸೋಮವಾರ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಚಲಿತ ವಿದ್ಯಮಾನಗಳನ್ನು ತಿಳಿದು, ಜ್ಞಾನ ಹೆಚ್ಚಿಸಿಕೊಳ್ಳಲು ದಿನಪತ್ರಿಕೆಗಳನ್ನು ತಪ್ಪದೆ ಓದಬೇಕು ಎಂದರು.
ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವಕಾಶ ನೀಡಿದರೆ ಅವರಿಂದ ಆಯಾ ಕ್ಷೇತ್ರದಲ್ಲಿ ಸಮಾಜಕ್ಕೆ ಗಣನೀಯ ಪ್ರಮಾಣದಲ್ಲಿ ಸೇವೆ ಲಭ್ಯವಾಗಲಿದೆ. ಆದರೆ, ಈಗ ಶ್ರೀಮಂತರಿಗೆ ಮೆಡಿಕಲ್ ಮತ್ತಿತರ ಉನ್ನತ ಶಿಕ್ಷಣ ಕೋರ್ಸ್‌ಗಳಲ್ಲಿ ಅವಕಾಶ ಎಂಬಂತಾಗಿದೆ. ಇದರಿಂದಾಗಿ ಬಡ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಕಮರುತ್ತಿದೆ ಎಂದು ವಿಷಾದಿಸಿದರು.
ಡಿಪ್ಲೊಮಾ, ಐಟಿಐ ಇತರ ವೃತ್ತಿಪರ ಕೋರ್ಸ್‌ಗಳ ಅಧ್ಯಯನದ ಅವಧಿಯಲ್ಲೇ ವಿದ್ಯಾರ್ಥಿಗಳನ್ನು ಉದ್ಯೋಗಳು ಅರಸಿ ಬರುತ್ತವೆ. ವಿದ್ಯಾವಂತರಿಂದ ಸಮಾಜಕ್ಕೆ ಯಾವ ರೀತಿಯಲ್ಲಿ ಉಪಕಾರವಾಗುತ್ತದೆ ಎಂಬುದನ್ನು ಗಮನಿಸಬೇಕಿದೆ. ಹಣ ಸಂಪಾದನೆಯೊಂದೇ ಗುರಿಯಾಗಬಾರದು. ಗುಣ ಸಂಪಾದನೆಯೂ ಮುಖ್ಯ. ಉದ್ಯೋಗ, ಉತ್ತಮ ಸಂವಹನಕ್ಕಾಗಿ ಇಂಗ್ಲಿಷ್ ಕಲಿಕೆಯ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ‌್ಯ ಎಸ್.ವಿ.ರವಿಶಂಕರ್ ಹಾಗೂ ಪಾಲಿಟೆಕ್ನಿಕ್ ವಿವಿಧ ವಿಭಾಗಳ ಮುಖ್ಯಸ್ಥರಾದ ಮಮ್ತಾಜ್ ಬೇಗಂ, ವಿ.ಟಿ.ರವಿ, ನಳಿನಾಕ್ಷಿ, ಪಿ.ಎ.ರಘು, ಮೋಹನ್ ಮಾತನಾಡಿದರು. ಟಿ.ಎನ್.ಲಿಂಗರಾಜು ಪ್ರಾರ್ಥಿಸಿದರು. ಅಧ್ಯಾಪಕಿ ಸವಿತಾ ಸ್ವಾಗತಿಸಿದರು.