

ಕಿಕ್ಕೇರಿ: ಪತ್ರಿಕೆಗಳು ಜ್ಞಾನ ವೃದ್ಧಿಸುವ ಕಣಜವಾಗಿದ್ದು, ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಎಸ್.ಕೆ.ದೇವರಾಜು ತಿಳಿಸಿದರು.
ಪಟ್ಟಣದ ಕೆಪಿಎಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ಪತ್ರಿಕೆ, ಪುಸ್ತಕ ಓದಿ ಜ್ಞಾನ ವೃದ್ಧಿಸಿಕೊಳ್ಳಿ’ ಕಾರ್ಯಕ್ರಮದಲ್ಲಿ ಮಾತನಾಡಿ, ಭವಿಷ್ಯದ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ. ಮಕ್ಕಳಲ್ಲಿ ಮಾನಸಿಕ ಖಿನ್ನತೆ ಭೂತದಂತಿದೆ. ಓದಿನ ಆಕರ್ಷಣೆ ಕಡಿಮೆ ಆಗಲು ಟಿವಿ, ಮೊಬೈಲ್ ಕಾರಣವಾಗಿವೆ. ಓದಿದಷ್ಟು ಜ್ಞಾನವನ್ನು ಹೆಚ್ಚಿಸಲು ಪತ್ರಿಕೆಗಳ ಕೊಡುಗೆ ಅಪಾರ ಎಂದರು.
ನನ್ನ ಓದಿನ ಸಮಯದಲ್ಲಿ ಪತ್ರಿಕೆ ಖರೀದಿಸಲು ಕಷ್ಟವಿತ್ತು. ಹುಡುಕಾಟದಿಂದ ಓದುತ್ತಿದ್ದೆವು. ಅಂದಿನ ಜ್ಞಾನದ ಹಸಿವು ಇಂದು ನೆಮ್ಮದಿಯ ಜೀವನ ನೀಡಿದೆ. ಸರ್ಕಾರಿ ಶಾಲೆಯಲ್ಲಿ ನೈಜ್ಯ ಪ್ರತಿಭೆಗಳಿವೆ. ಪೋಷಿಸುವ ಕೆಲಸವಾಗಬೇಕಿದೆ. ಓದುವ ಮಕ್ಕಳಿಗೆ ಪುಸ್ತಕ, ಪತ್ರಿಕೆ ನೆರವು ನೀಡಲು ನಾನು ಬದ್ಧವಿದ್ದು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯಶಿಕ್ಷಕಿ ಬಿ.ಕೆ.ಮಮತಾ ಮಾತನಾಡಿ, ಮಕ್ಕಳಿಗೆ ಪತ್ರಿಕೆ ಓದುವುದು ದೈನಂದಿನ ಚಟುವಟಿಕೆಯ ಭಾಗವಾಗಬೇಕಿದೆ. ಶಾಲೆಯಲ್ಲಿ ಪತ್ರಿಕೆ ಓದುವ ಜತೆಗೆ ತಮ್ಮ ಮನೆಯ ಪರಿಸರದಲ್ಲಿಯೂ ಪತ್ರಿಕೆ, ಪುಸ್ತಕ ಓದುವ ವಾತಾವರಣ ಸೃಷ್ಟಿಸಬೇಕಿದೆ ಎಂದರು.
ಶಿಕ್ಷಕರಾದ ರೇಷ್ಮಾ, ಎಸ್.ವಿಷಕಂಠ, ಎಸ್.ಆರ್.ಸುರೇಶ್, ಅತಿಥಿ ಶಿಕ್ಷಕರಾದ ಪುಷ್ಪಾ, ರೇಖಾ ಇದ್ದರು.